SK Home Ad
Home ಸುದ್ದಿ ರಾಜ್ಯ ಬಸವಣ್ಣನವರ ಅವಹೇಳನ: ಬೆಳಗಾವಿಯಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆ

ಬಸವಣ್ಣನವರ ಅವಹೇಳನ: ಬೆಳಗಾವಿಯಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆ

0
3

ಬೆಳಗಾವಿ: ಬಸವಣ್ಣನವರ ಕುರಿತು ಸಂವಾದ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಪೋಸ್ಟ್ ಅವಹೇಳನಕಾರಿಯಾಗಿವೆ ಎಂದು ಆರೋಪಿಸಿ ಶುಕ್ರವಾರ ಬೆಳಗಾವಿಯ ಲಿಂಗಾಯತ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದವು.

ಬೆಳಗಾವಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಪತಿ ಡಾ.ಅಲ್ಲಮಪ್ರಭು ಸ್ವಾಮೀಜಿ ಹಾಗೂ ಅಥಣಿ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಪ್ರತಿಭಟನಾಕಾರರು, ಲೇಖಕ ರವಿ ಹಂಜ ಹಾಗೂ ಸಂದರ್ಶನ ಪ್ರಸಾರ ಮಾಡಿದ ವಾಹಿನಿಯ ಸಂಪಾದಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಜಾಗತಿಕ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಅವರು ನೀಡಿದ ದೂರಿನ ಮೇರೆಗೆ ಮಾರ್ಕೆಟ್ ಠಾಣೆಯಲ್ಲಿ ನವೆಂಬರ್ 19ರಂದು ಪ್ರಕರಣ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ರವಿ ಹಂಜ ಮತ್ತು ಟಿವಿಯ ಸಂಪಾದಕರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.

ದೂರಿನಲ್ಲಿರುವ ಆರೋಪವೇನು?: ನವೆಂಬರ್ 13ರಂದು ಬೆಳಗಾವಿಯ ಕೃಷ್ಣದೇವರಾಯ ವೃತ್ತದ ಬಳಿಯ ವಿಶ್ವಗುರು ಕಾಂಪ್ಲೆಕ್ಸ್‌ನಲ್ಲಿ ನಡೆದ ಸಂವಾದದಲ್ಲಿ ಬಸವಣ್ಣನವರ ಬಗ್ಗೆ ಆಕ್ಷೇಪಾರ್ಹ ಪದಗಳನ್ನು ಬಳಸಲಾಗಿದೆ ಎಂದು ರೊಟ್ಟಿ ದೂರಿನಲ್ಲಿ ಹೇಳಿದ್ದಾರೆ. ಕಾರ್ಯಕ್ರಮದಲ್ಲಿನ ಮಾತುಗಳ ಜತೆಗೆ, ರವಿ ಹಂಜಗಿ ಅವರ ಫೇಸ್‌ಬುಕ್ ಖಾತೆಯಲ್ಲಿ ಬಸವಣ್ಣನವರ ಕುರಿತು ಪ್ರಕಟವಾದ ಪೋಸ್ಟ್ ಹಾಗೂ ಶರಣರ ವಚನಗಳನ್ನು ಕುರಿತ ಹೇಳಿಕೆಗಳನ್ನೂ ಅವರು ಆಕ್ಷೇಪಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 192, 196(1), 299, 353(2) ಹಾಗೂ 3(5)ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಎಫ್‌ಐಆರ್‌ನಲ್ಲಿ ತನಿಖೆಯನ್ನು ಮುಂದಿನ ಕ್ರಮವೆಂದು ನಮೂದಿಸಲಾಗಿದೆ. ಪ್ರತಿಭಟನೆ ನಡೆಸಿದ ಸಂಘಟನೆಗಳ ಪ್ರತಿನಿಧಿಗಳು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲೂ ಪ್ರಕರಣದ ಸಮಗ್ರ ತನಿಖೆ ಮತ್ತು ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಮಹಾಸಬೆಯ ಪ್ರಧಾನ ಕಾರ್ಯದರ್ಶಿ ಅಶೋಕ್ ಮಳಗಲಿ, ಉಪಾಧ್ಯಕ್ಷ ಮುರುಗೇಶ ಶಿವಪೂಜಿ, ರಾಷ್ಟ್ರೀಯ ಬಸವದಳದ ಅಶೋಕ್ ಬೆಂಡಿಗೇರಿ, ಲಿಂಗಾಯತ್ ಸಂಘಟನೆಯ ಈರಣ್ಣ ದೇಯಣ್ಣವರ, ರಾಷ್ಟ್ರೀಯ ಬಸವದಳದ ಶಂಕರ ಗುಡಸ, ರತ್ನಾ ಬೆನಸಿನಮರಡಿ, ಮುರಿಗೆಪ್ಪ ಬಾಳಿ, ಶಿವಾನಂದ ಮೆಟ್ಯಾಳ, ಸುರೇಶ್ ನರಗುಂದ ಎಸ್.ಜಿ. ಸಿದ್ನಾಳ ಸೇರಿದಂತೆ ಬಸವಪರ ಸಂಘಟನೆಗಳ ನೂರಾರು ಧುರೀಣರು ಉಪಸ್ಥಿತರಿದ್ದರು.

ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ: ಡಾ. ಅಲ್ಲಮಪ್ರಭು ಸ್ವಾಮೀಜಿಯವರು ಮಾತನಾಡಿ, ಬಸವಣ್ಣನವರ ವ್ಯಕ್ತಿತ್ವ ಹಾಗೂ ತತ್ವಾದರ್ಶಗಳಿಗೆ ಧಕ್ಕೆ ತರುವ ಪ್ರಯತ್ನವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಇಂತಹ ಕೃತ್ಯಗಳ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಬಸವಣ್ಣನವರ ವಿಚಾರಧಾರೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರೂ ಗೌರವಿಸುತ್ತಿದ್ದು, ಇಂತಹ ಮಹಾನ್ ದಾರ್ಶನಿಕರ ಕುರಿತು ಅವಹೇಳನಕಾರಿ ಬರಹಗಳನ್ನು ಪ್ರಕಟಿಸಿರುವುದು ಖಂಡನೀಯ. ವಿವಾದಿತ ಪುಸ್ತಕವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿರುವುದು ಸ್ವಾಗತಾರ್ಹ. ಪುಸ್ತಕದ ಮಾರಾಟ ಮತ್ತು ಪ್ರಸಾರ ಸಂಪೂರ್ಣವಾಗಿ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹೋರಾಟ ತೀವ್ರ- ಎಚ್ಚರಿಕೆ: ಅಥಣಿ ಮೋಟೆಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಮಾತನಾಡಿ, ಮಹಾನ್ ದಾರ್ಶನಿಕರನ್ನು ನಿಂದಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಗಂಭೀರ ಅಪರಾಧ ಎಸಗಲಾಗಿದೆ. ಲೇಖಕ ರವಿ ಹಂಜಿ ವಿದೇಶದ ಯಾವುದೇ ಮೂಲೆಯಲ್ಲಿದ್ದರೂ ಬಂಧಿಸಿ ರಾಜ್ಯಕ್ಕೆ ಕರೆತರಬೇಕು. ಆರೋಪಿ ಬಿಡುಗಡೆ ಮಾಡಿದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದರ ಜತೆಗೆ ಕಾನೂನು ಹೋರಾಟಕ್ಕೂ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.