ಪಣಜಿ: ಪ್ರವಾಸಿಗರು ಹಾಗೂ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಗೋವಾ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ರಾಜ್ಯದ ಎಲ್ಲಾ ಅಂಗಡಿಗಳು ಹಾಗೂ ಶಾಪಿಂಗ್ ಮಾಲ್ಗಳು ದಿನದ 24 ಗಂಟೆಯೂ ತೆರೆದಿಡಲು ಅನುಮತಿ ನೀಡಲಾಗಿದೆ. ಈ ಮೂಲಕ ದಿನದ 24 ಗಂಟೆಯೂ ಅಂಗಡಿ, ಮಾಲ್ಗಳನ್ನು ತೆರೆಯಲು ಅವಕಾಶ ನೀಡಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಗೋವಾ ಪಾತ್ರವಾಗಿದೆ.
ಗೋವಾ ಅಂಗಡಿಗಳು ಹಾಗೂ ಸಂಸ್ಥೆಗಳು (ಉದ್ಯೋಗ ನಿಯಮಾವಳಿ ಮತ್ತು ಸೇವಾ ಪರಿಸ್ಥಿತಿ) ಕಾಯ್ದೆಯ 11ನೇ ವಿಧಿಯಡಿ ಕಾರ್ಮಿಕ ಇಲಾಖೆಯು ಮಂಗಳವಾರ ಈ ಕುರಿತು ಅಧಿಸೂಚನೆ ಹೊರಡಿಸಿದೆ.
ಪ್ರವಾಸಿಗರು ಸೇರಿದಂತೆ ಗ್ರಾಹಕರು ಸಾಮಾನ್ಯ ವ್ಯವಹಾರಿಕ ಸಮಯ ಮೀರಿದ ನಂತರವೂ ತಮಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಲು ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸರ್ಕಾರ ನೀಡಿರುವ ಈ ಅನುಮತಿ ಮುಂದಿನ ಮೂರು ವರ್ಷಗಳವರೆಗೆ ಜಾರಿಯಲ್ಲಿರಲಿದೆ. ಆದರೆ, ಈ ಅವಧಿಯಲ್ಲಿ ಅಗತ್ಯವೆನಿಸಿದರೆ ಅಧಿಸೂಚನೆಯನ್ನು ರದ್ದುಗೊಳಿಸುವ ಅಧಿಕಾರವೂ ಸರ್ಕಾರಕ್ಕಿದೆ.
ಕಾಯ್ದೆಯ ಶಾಸನೀಯ ಪ್ರಸ್ತಾವನೆಗಳ ಅನ್ವಯ ಅಂಗಡಿಗಳು ಹಾಗೂ ವಾಣಿಜ್ಯ ಸಂಸ್ಥೆಗಳು ದಿನದ 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ನಿಗದಿಪಡಿಸಿರುವ ಕಾನೂನು ಮತ್ತು ನಿಯಮಗಳನ್ನು ಉಲ್ಲಂಘಿಸಿದರೆ ಸಂಬಂಧಪಟ್ಟ ಸಂಸ್ಥೆಗಳು ಕ್ರಮ ಎದುರಿಸಬೇಕಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.





















