ದಾವಣಗೆರೆ: ಜಿಲ್ಲೆಯ ಹರಿಹರ ಪಂಚಮಸಾಲಿ ಪೀಠಕ್ಕೆ ಸರ್ಕಾರದಿಂದ ನೀಡಿದ ಅನುದಾನ ದುರ್ಬಳಕೆ ಆರೋಪ ಕುರಿತಂತೆ ಶುಕ್ರವಾರ ಶ್ರೀಮಠದಲ್ಲಿ ನಡೆಯ ಬೇಕಾಗಿದ್ದ ಜಂಟಿ ತಪಾಸಣೆಯನ್ನು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ತಂಡವು ಮತ್ತೆ ಮಂದೂಡಿದೆ.
ಬೆಂಗಳೂರಿನ ವಿಧಾನಸೌಧದಲ್ಲಿ ಲೋಕೋಪಯೋಗಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಶುಕ್ರವಾರ ಕರೆದಿದ್ದ ಹಿನ್ನೆಲೆಯಲ್ಲಿ ಹರಿಹರ ಪಂಚಮಸಾಲಿ ಪೀಠದ ಅನುದಾನ ದುರ್ಬಳಕೆ ಆರೋಪದ ಕುರಿತ ಜಂಟಿ ತಪಾಸಣೆ ಕಾರ್ಯವನ್ನು ಇಲಾಖೆ ಮುಂದೂಡಿದೆ ಎನ್ನಲಾಗಿದೆ.
ಜಿಲ್ಲೆಯ ಹರಿಹರ ತಾಲೂಕು ಹನಗವಾಡಿ ಸಮೀಪವಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಮಠಕ್ಕೆ ಜಂಟಿ ತಪಾಸಣೆಗೆಂದು ಇಲಾಖೆ ಅಧಿಕಾರಿಗಳ ತಂಡವು ಶುಕ್ರವಾರ ಭೇಟಿ ನೀಡಬೇಕಿತ್ತು. ಕಳೆದ ಅಕ್ಟೋಬರ್ 15ರಂದು ಮಠಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳ ತಂಡವು ಸ್ಥಳ ಪರಿಶೀಲನೆಗೆ ಹಾಜರಾಗುವ ಮುನ್ನ ಸೂಚನಾ ಪತ್ರ ನೀಡಿ, ತಪಾಸಣೆ ಮಾಡಬೇಕೆಂದು ಲೆಕ್ಕ ಕೊಡಿ ಚಳವಳಿ ಸಮಿತಿ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ನ. 13ಕ್ಕೆ ಜಂಟಿ ತಪಾಸಣೆಗಾಗಿ ಅಧಿಕಾರಿಗಳು ದಿನಾಂಕ ನಿಗದಿಪಡಿಸಿದ್ದರು.
ಇದೀಗ ಜಂಟಿ ತಪಾಸಣೆಯನ್ನು ಮತ್ತೆ ಮುಂದೂಡಲಾಗಿದೆ. ತಪಾಸಣೆಯ ಮುಂದಿನ ದಿನಾಂಕವನ್ನು ತಿಳಿಸುವುದಾಗಿ ಅಧಿಕಾರಿಗಳು ಗುರುವಾರ ರಾತ್ರಿ ಲೆಕ್ಕ ಕೊಡಿ ಚಳವಳಿ ಸಮಿತಿ ಅಧ್ಯಕ್ಷರಿಗೆ ಪತ್ರ, ವಾಟ್ಸಪ್ ಮೂಲಕ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.






















