SK Home Ad
Home ನಮ್ಮ ಜಿಲ್ಲೆ ಬೆಂಗಳೂರು ಬೆಳಗ್ಗೆ ಪ್ರೀತಿ, ರಾತ್ರಿ ಕಿರಿಕಿರಿ: ದಂಪತಿಯ ಜಗಳ ಕೊಲೆಯಲ್ಲಿ ಅಂತ್ಯ

ಬೆಳಗ್ಗೆ ಪ್ರೀತಿ, ರಾತ್ರಿ ಕಿರಿಕಿರಿ: ದಂಪತಿಯ ಜಗಳ ಕೊಲೆಯಲ್ಲಿ ಅಂತ್ಯ

0
31

ಬೆಂಗಳೂರು: ಮಕ್ಕಳಾಗಿಲ್ಲ ಎಂದು ಹೀಯಾಳಿಸುತ್ತಿದ್ದ ಪತಿಯನ್ನು ಚಾಕುವಿನಿಂದ ಇರಿದು ಪತ್ನಿಯೇ ಕೊಲೆಗೈದಿರುವ ಘಟನೆ ಕೆಂಪೇಗೌಡ ನಗರದ ಲಕ್ಷ್ಮೀಪುರದಲ್ಲಿ ನಡೆದಿದೆ.

ರಾಜಶೇಖರ್ (44) ಕೊಲೆಯಾದ ವ್ಯಕ್ತಿ. ಮಾಲಾಶ್ರೀ ಕೊಲೆ ಆರೋಪಿಯಾಗಿದ್ದಾರೆ. ಬ್ಯಾಂಕ್‌ನಲ್ಲಿ ಲೋನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ರಾಜಶೇಖರ್ ಪ್ರತಿದಿನ ಮದ್ಯ ಸೇವಿಸಿ ಬಂದು ಗಲಾಟೆ ಮಾಡುತ್ತಿದ್ದ. ಬೆಳಗ್ಗೆ ಹೊತ್ತು ಮಾತ್ರ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ರಾತ್ರಿಯಾದ್ರೆ ಸಾಕು ಕುಡಿದು ಕ್ಯಾತೆ ತೆಗೆಯುತ್ತಿದ್ದ. ಮಕ್ಕಳಾಗಿಲ್ಲ ಎಂದು ಆಗಾಗ ಇಬ್ಬರ ಮಧ್ಯೆ ಗಲಾಟೆಯಾಗುತ್ತಲೇ ಇತ್ತು. ರಾತ್ರಿ ಕುಡಿದ ಮತ್ತಿನಲ್ಲಿ ಬಂದು ಗಲಾಟೆ ಮಾಡಿದ್ದ ಅದು ವಿಕೋಪಕ್ಕೆ ಹೋಗಿ ಕೊಲೆ ನಡೆದಿದೆ.

ಇನ್ನು ಪತಿಯನ್ನೇ ಕೊಂದಿರುವ ಆರೋಪಿ ಮಾಲಾಶ್ರೀ, ಈ ಹಿಂದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಆ ಸಂಬಂಧ ನಿಮ್ಹಾನ್ಸ್‌ನಲ್ಲಿ ಮೂರು ತಿಂಗಳು ಚಿಕಿತ್ಸೆ ಸಹ ಪಡೆದಿದ್ದಳು. ನಾಲ್ಕು ತಿಂಗಳ ಹಿಂದಷ್ಟೆ ಆಕೆಯನ್ನು ಆಸ್ಪತ್ರೆಯಿಂದ ಮರಳಿ ಮನೆಗೆ ಕರೆತರಲಾಗಿತ್ತು.

ಮಕ್ಕಳಾಗಿಲ್ಲ ಎಂದು ಪತಿ ರಾಜಶೇಖರ್ ಪದೇ ಪದೆ ಗಲಾಟೆ ಮಾಡುತ್ತಿದ್ದ ಹಿನ್ನೆಲೆ ಮಾಲಾಶ್ರೀ ಖಿನ್ನತೆಗೆ ಒಳಗಾಗಿದ್ದಳು. ಐದು ವರ್ಷದ ಹಿಂದೆ ಮಾಲಾಶ್ರೀ ಮತ್ತು ರಾಜಶೇಖರ್ ವಿವಾಹವಾಗಿತ್ತು. ಸದ್ಯ ಆಕೆ ಎರಡು ತಿಂಗಳ ಗರ್ಭಿಣಿ ಎನ್ನಲಾಗಿದ್ದು ಗಲಾಟೆ ವಿಕೋಪಕ್ಕೆ ಹೋಗಿ ಪತಿಗೆ ಚಾಕು ಇರಿದ್ದಾಳೆ. ನಂತರ ಮನೆಗೆ ಕರೆ ಮಾಡಿ ಅತ್ತಿದ್ದಾಳೆ.

ಮೊದಲ ಮಹಡಿಯಲ್ಲಿ ರಾಜಶೇಖರ ತಾಯಿ ವಾಸ ಮಾಡುತ್ತಿದ್ದು, ಘಟನೆ ನಂತರ ಹೋಗಿ ಬಾಗಿಲು ಬಡಿದ್ರೂ ತೆಗೆದಿರ್ಲಿಲ್ಲ. ಅಷ್ಟೊತ್ತಿಗೆ ತೀವ್ರ ರಕ್ತಸ್ರಾವದಿಂದ ರಾಜಶೇಖ‌ರ್ ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.