SK Home Ad
Home ನಮ್ಮ ಜಿಲ್ಲೆ ಹಾಸನ ಹಾಸನಾಂಬೆ ದೇಗುಲದ ಬೊಕ್ಕಸಕ್ಕೆ ₹29.55 ಕೋಟಿ ಆದಾಯ; ಕಳೆದ ವರ್ಷಕ್ಕಿಂತ ₹4 ಕೋಟಿ ಹೆಚ್ಚಳ!

ಹಾಸನಾಂಬೆ ದೇಗುಲದ ಬೊಕ್ಕಸಕ್ಕೆ ₹29.55 ಕೋಟಿ ಆದಾಯ; ಕಳೆದ ವರ್ಷಕ್ಕಿಂತ ₹4 ಕೋಟಿ ಹೆಚ್ಚಳ!

0
5

ಹಾಸನ: ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನೋತ್ಸವಕ್ಕೆ ಭಕ್ತರಿಂದ ಭರ್ಜರಿ ಸ್ಪಂದನೆ ವ್ಯಕ್ತವಾಗಿದ್ದು, ಈ ಬಾರಿಯ ಉತ್ಸವದಲ್ಲಿ ದೇವಾಲಯಕ್ಕೆ ಬರೋಬ್ಬರಿ 29.55 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಕಳೆದ ವರ್ಷ 25.59 ಕೋಟಿ ರೂ. ಆದಾಯ ಬಂದಿತ್ತು. ಈ ಬಾರಿ ಕಳೆದ ವರ್ಷಕ್ಕಿಂತ ಸುಮಾರು 4 ಕೋಟಿ ರೂ. ಹೆಚ್ಚುವರಿ ಆದಾಯ ಹರಿದುಬಂದಿದೆ.

ನಗರದ ತೇರಾಪಂಥ್ ಭವನದಲ್ಲಿ ಗುರುವಾರ ಬಿಗಿ ಪೊಲೀಸ್ ಭದ್ರತೆಯ ನಡುವೆ ಹುಂಡಿ ಹಣ ಎಣಿಕೆ ಕಾರ್ಯ ನಡೆಯಿತು. ಭಕ್ತರು ಸಲ್ಲಿಸಿದ ಕಾಣಿಕೆ, ಹರಕೆ ಹಾಗೂ ದೇಣಿಗೆಯಿಂದ ದೇವಾಲಯದ ಆದಾಯದಲ್ಲಿ ಗಣನೀಯ ಏರಿಕೆಯಾಗಿದೆ.

ಹುಂಡಿ ಎಣಿಕೆ ವೇಳೆ 43 ಗ್ರಾಂ 170 ಮಿಲಿ ಚಿನ್ನ ಹಾಗೂ 1 ಕೆ.ಜಿ. 255 ಗ್ರಾಂ 300 ಮಿಲಿ ಬೆಳ್ಳಿ ಪತ್ತೆಯಾಗಿದೆ. ನಗದು ಹಣದ ಜತೆಗೆ ವಿದೇಶಿ ಕರೆನ್ಸಿಗಳನ್ನೂ ಭಕ್ತರು ಕಾಣಿಕೆಯಾಗಿ ಸಲ್ಲಿಸಿದ್ದಾರೆ.

ಇನ್ನು ಹುಂಡಿಯಲ್ಲಿ ನಿಷೇಧಿತ ಹಳೆಯ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳು ಹಾಗೂ ನಕಲಿ ನೋಟುಗಳೂ ಪತ್ತೆಯಾಗಿರುವುದು ಗಮನ ಸೆಳೆದಿದೆ. ಈ ಬಾರಿಯ ದರ್ಶನೋತ್ಸವದಲ್ಲಿ ಭಕ್ತರ ಕಾಣಿಕೆಯಿಂದ ಹಾಸನಾಂಬೆಯ ದೇವಾಲಯದ ಆದಾಯ ಹೊಸ ದಾಖಲೆ ಮಟ್ಟ ತಲುಪಿದೆ.