ಬೆಂಗಳೂರು: ದೀಪಾವಳಿಯ ಸಂದರ್ಭದಲ್ಲಿ ರಾಜ್ಯದ ಜನತೆ ಸಂತೋಷದಿಂದ ಹಬ್ಬ ಆಚರಿಸುವ ವಾತಾವರಣವನ್ನು ಕಾಂಗ್ರೆಸ್ ಸರ್ಕಾರ ನಿರ್ಮಿಸಿಲ್ಲ. ಬಡವರು, ರೈತರು, ವೃದ್ಧರು, ಯುವಕರು ಸೇರಿದಂತೆ ಜನಸಾಮಾನ್ಯರು ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಹಬ್ಬದ ಸಂದರ್ಭದಲ್ಲಿ ಜನರ ಮೇಲೆ ಬೆಲೆ ಏರಿಕೆಯ ಗದಾಪ್ರಹಾರ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ತೀವ್ರ ನೋವಿನಿಂದ ಮಾತನಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದ ಅವೈಜ್ಞಾನಿಕ ಬೆಲೆ ಏರಿಕೆಯನ್ನು ಖಂಡಿಸಿ ಬಿಜೆಪಿ ನಾಡಿನ ಜನರ ಪರವಾಗಿ ಹೋರಾಟ ನಡೆಸಲಿದೆ. ನವೆಂಬರ್ 11ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಒಂದು ದಿನದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಮಾಜಿ ಚುನಾಯಿತ ಪ್ರತಿನಿಧಿಗಳು, ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಾಯಕರು ಹಾಗೂ ಪಕ್ಷದ ರಾಜ್ಯ ಪದಾಧಿಕಾರಿಗಳು ಸೇರಿದಂತೆ ಎಲ್ಲ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಜಿಲ್ಲಾ ಕೇಂದ್ರಗಳಲ್ಲಿ ನಡೆಯುತ್ತಿರುವ ಪಾದಯಾತ್ರೆಗಳಲ್ಲೂ ಬೆಲೆ ಏರಿಕೆ ವಿರುದ್ಧದ ಹೋರಾಟ ಮುಂದುವರಿಸಲಾಗುವುದು. ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಪ್ರತಿಭಟನೆ ನಡೆಯಲಿದೆ. ಜನಸಾಮಾನ್ಯರು, ಬಡವರು ಮತ್ತು ರೈತರ ಪರವಾಗಿ ಬಿಜೆಪಿ ಯಾವುದೇ ಕಾರಣಕ್ಕೂ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಸಿದರು.
ಹಾಲಿನ ದರವನ್ನು ಲೀಟರ್ಗೆ 8 ರೂ. ಹೆಚ್ಚಿಸುವುದಾಗಿ ಘೋಷಿಸಿದ ಸರ್ಕಾರ, ವಾಸ್ತವದಲ್ಲಿ ವಿವಿಧ ಉತ್ಪನ್ನಗಳ ದರವನ್ನು 12ರಿಂದ 14 ರೂ.ವರೆಗೆ ಹೆಚ್ಚಿಸಿದೆ. ಒಂದು ಕೆ.ಜಿ. ತುಪ್ಪದ ದರದಲ್ಲಿ 180 ರೂ. ಹೆಚ್ಚಳವಾಗಿದೆ. ಮೊಸರಿನ ದರದಲ್ಲೂ 14 ರೂ. ಏರಿಕೆ ಮಾಡಲಾಗಿದೆ. ತುಪ್ಪವೇನೂ ಐಷಾರಾಮಿ ವಸ್ತುವಲ್ಲ. ಸಾಮಾನ್ಯ ಕುಟುಂಬಗಳೂ ಬಳಸುವ ಅಗತ್ಯ ಆಹಾರ ಪದಾರ್ಥವಾಗಿದೆ. ಗ್ರಾಮೀಣ ಭಾಗದಲ್ಲಿ ಊಟಕ್ಕೆ ಅಡುಗೆ ಇಲ್ಲದಿದ್ದರೂ ಒಂದು ಲೋಟ ಹಾಲು ಕುಡಿದು ಮಲಗಬಹುದು ಎಂಬ ಮಾತಿದೆ. ಆದರೆ ಇಂದು ಬಡ ಕುಟುಂಬಗಳು ಒಂದು ಲೋಟ ಹಾಲು ಖರೀದಿಸುವ ಮುನ್ನವೂ ಯೋಚಿಸುವ ಪರಿಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ಸೃಷ್ಟಿಸಿದೆ. ಹಾಲಿನ ದರ ಹೆಚ್ಚಳದಿಂದ ರೈತರಿಗೆ ಲಾಭವಾಗುವುದಾದರೆ ಅದನ್ನು ನಾವು ಸ್ವಾಗತಿಸುತ್ತೇವೆ. ಪ್ರತಿ ಲೀಟರ್ ಹಾಲಿಗೆ ಹೆಚ್ಚುವರಿಯಾಗಿ ನೀಡುವ 7 ರೂ. ಪ್ರೋತ್ಸಾಹಧನದ ಹೊರೆಯನ್ನು ಸರ್ಕಾರವೇ ಭರಿಸಬೇಕು ಎಂದು ಆಗ್ರಹಿಸಿದರು.
ಕೆಎಸ್ಆರ್ಟಿಸಿ ಸೇರಿದಂತೆ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ. 40ರಿಂದ 50ರಷ್ಟು ಹೆಚ್ಚಿಸುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ಹಲವು ಕಡೆಗಳಲ್ಲಿ ಪ್ರಯಾಣಿಕರ ಮೇಲೆ ಶೇ. 70ರಿಂದ 80ರವರೆಗೆ ಹೆಚ್ಚುವರಿ ಹೊರೆ ಬೀಳುತ್ತಿದೆ.
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡಿರುವ ಸರ್ಕಾರ, ಸಾರಿಗೆ ನಿಗಮಗಳಿಗೆ ಪಾವತಿಸಬೇಕಾದ ಸಾವಿರಾರು ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಇದರಿಂದ ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಬಸ್ ಡಿಪೋಗಳಲ್ಲಿ ಡೀಸೆಲ್ ಖರೀದಿಸಲೂ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದನ್ನು ಸ್ವತಃ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ. 50ರಷ್ಟು ಬಸ್ಗಳು ಸಮರ್ಪಕವಾಗಿ ಸಂಚರಿಸದಿರುವುದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ದುಸ್ಥಿತಿಗೆ ಕಾಂಗ್ರೆಸ್ ಸರ್ಕಾರದ ಆರ್ಥಿಕ ನಿರ್ವಹಣೆಯ ವೈಫಲ್ಯವೇ ಕಾರಣ ಎಂದು ವಿಜಯೇಂದ್ರ ದೂರಿದರು.




















