ಕರ್ನಾಟಕದಲ್ಲಿ ‘E20’ ಹೆಸರಿನಲ್ಲಿ ಮಾರಾಟವಾಗುತ್ತಿರುವ ಪೆಟ್ರೋಲ್ನಲ್ಲಿ ನಿಗದಿತ ಶೇಕಡಾ 20ಕ್ಕಿಂತಲೂ ಅಧಿಕ ಪ್ರಮಾಣದ ಎಥೆನಾಲ್ ಬೆರೆಸಲಾಗುತ್ತಿದೆ ಎಂಬ ಗಂಭೀರ ಆರೋಪ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.
ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಬಿಡುಗಡೆ ಮಾಡಿದ ಲ್ಯಾಬ್ ವರದಿಯಲ್ಲಿ, ರಾಜ್ಯದ 7 ಜಿಲ್ಲೆಗಳಲ್ಲಿ ಸಂಗ್ರಹಿಸಲಾದ ಮಾದರಿಗಳಲ್ಲಿ ಶೇ. 31.2 ರಷ್ಟು ಎಥೆನಾಲ್ ಪತ್ತೆಯಾಗಿದೆ ಎಂದು ಹೇಳಲಾಗಿತ್ತು. ಐಒಸಿಎಲ್ನಲ್ಲಿ ಶೇ. 31.2, ಹೆಚ್ಪಿಸಿಎಲ್ನಲ್ಲಿ ಶೇ. 30.5 ಹಾಗೂ ಬಿಪಿಸಿಎಲ್, ನಯಾರಾ, ಶೆಲ್ ಇಂಧನಗಳಲ್ಲಿ ಶೇ. 25 ರಿಂದ 26 ರಷ್ಟು ಎಥೆನಾಲ್ ಕಂಡುಬಂದಿದ್ದು, ಇದರಿಂದ ವಾಹನಗಳ ಎಂಜಿನ್ ಹಾಳಾಗಿ ಗ್ರಾಹಕರಿಗೆ ವಾರ್ಷಿಕ ಸುಮಾರು ₹1 ಲಕ್ಷ ಕೋಟಿ ನಷ್ಟವಾಗುತ್ತಿದೆ ಎಂದು ಸಚಿವರು ಆರೋಪಿಸಿದ್ದರು. ಅಲ್ಲದೆ ‘E20 ಪರಿಹಾರ ನಿಧಿ’ ಸ್ಥಾಪನೆಗೂ ಒತ್ತಾಯಿಸಿದ್ದರು.
ಆದರೆ ಈ ಆರೋಪಗಳನ್ನು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಹಾಗೂ ಸಾರ್ವಜನಿಕ ವಲಯದ ತೈಲ ಕಂಪನಿಗಳು (OMCs) ಸಂಪೂರ್ಣವಾಗಿ ತಳ್ಳಿಹಾಕಿವೆ. ದೇಶಾದ್ಯಂತ 27 ರಾಜ್ಯಗಳಲ್ಲಿ ಪರೀಕ್ಷಿಸಲಾದ 893 ಮಾದರಿಗಳಲ್ಲಿ ಹಾಗೂ ಕರ್ನಾಟಕದ 56 ಮಾದರಿಗಳಲ್ಲಿ ಎಥೆನಾಲ್ ಪ್ರಮಾಣ ಶೇ. 19 ರಿಂದ 21ರ ನಿಗದಿತ ಮಿತಿಯಲ್ಲೇ ಇದ್ದು, ರಾಜ್ಯದ ಸರಾಸರಿ ಕೇವಲ ಶೇ. 19.30 ರಷ್ಟಿದೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
ರಾಜ್ಯ ಸರ್ಕಾರವು ಮಾದರಿ ಸಂಗ್ರಹಣೆ ಹಾಗೂ ಪರೀಕ್ಷೆ ವೇಳೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (IS 17021) ಶಿಷ್ಟಾಚಾರಗಳನ್ನು ಪಾಲಿಸಿಲ್ಲ, ಹೀಗಾಗಿ ಆ ವರದಿಗೆ ಮಾನ್ಯತೆಯಿಲ್ಲ ಎಂದು ತೈಲ ಕಂಪನಿಗಳು ತಿರುಗೇಟು ನೀಡಿವೆ. ಪೆಟ್ರೋಲ್ಗಿಂತ ಎಥೆನಾಲ್ ದರವೇ ಹೆಚ್ಚಿರುವುದರಿಂದ ಹೆಚ್ಚು ಎಥೆನಾಲ್ ಬೆರೆಸಿ ಕಂಪನಿಗಳು ನಷ್ಟ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬ ವಾದವನ್ನೂ ಮುಂದಿಟ್ಟಿವೆ.
ಈ ವಿವಾದದ ಬೆನ್ನಲ್ಲೇ ಐಒಸಿಎಲ್, ಬಿಪಿಸಿಎಲ್ ಮತ್ತು ಹೆಚ್ಪಿಸಿಎಲ್ ಕಂಪನಿಗಳು ರಾಜ್ಯ ಸರ್ಕಾರಕ್ಕೆ ಮುಕ್ತ ಸವಾಲೊಡ್ಡಿದ್ದು, ಅಧಿಕೃತ ಪ್ರಯೋಗಾಲಯದಲ್ಲಿ ಜಂಟಿ ಪರೀಕ್ಷೆ ನಡೆಸಲು ಆಹ್ವಾನ ನೀಡಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ರಿಜ್ವಾನ್ ಅರ್ಷದ್, ತೈಲ ಕಂಪನಿಗಳ ಹೇಳಿಕೆಯನ್ನು ಪರಿಶೀಲಿಸಿದ್ದು ಸೋಮವಾರ ದಾಖಲೆ ಸಮೇತ ವಿವರವಾದ ಉತ್ತರ ನೀಡುವುದಾಗಿ ತಿಳಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ ಪೆಟ್ರೋಲ್ ಕಲಬೆರಕೆ ವಿವಾದ ಇದೀಗ ಹೊಸ ಟ್ವಿಸ್ಟ್ ಪಡೆದುಕೊಂಡಿದೆ.





















