ಬರೋಬ್ಬರಿ 4,000 ಕೋಟಿ ರೂಪಾಯಿ ಬಜೆಟ್… ರಣಬೀರ್ ಕಪೂರ್ ರಾಮನಾದರೆ, ರಾವಣನಾಗಿ ಎಂಟ್ರಿ ಕೊಟ್ಟ ನಮ್ಮ ರಾಕಿಂಗ್ ಸ್ಟಾರ್ ಯಶ್.
ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಜುಗಲ್ಬಂದಿ… ಜಗತ್ತೇ ಬೆರಗಾಗುವಂತೆ ತೆರೆಗೆ ಬಂದಿರೋ ‘ರಾಮಾಯಣ’ ಸಿನಿಮಾ ಹೇಗಿದೆ? ಕಣ್ಣು ಕೋರೈಸುವ ವಿಶುವಲ್ಸ್ ನಡುವೆ ಕಥೆಯ ಜೀವ ಉಳಿದಿದ್ಯಾ? ಇಲ್ಲಿದೆ ನೋ-ಫಿಲ್ಟರ್, ಪ್ರಾಮಾಣಿಕ ವಿಮರ್ಶೆ..
ನಿರ್ದೇಶಕ ನಿತೇಶ್ ತಿವಾರಿ ಕನಸಿನ ರಾಮಾಯಣದ ಮೊದಲ ನೋಟವೇ ಪ್ರೇಕ್ಷಕನನ್ನು ಬೇರೆಯದೇ ಜಗತ್ತಿಗೆ ಕರೆದೊಯ್ಯುತ್ತದೆ. ಆಕಾಶದಲ್ಲಿ ಹಾರುವ ಆನೆಗಳು, ರಥ ಎಳೆಯುವ ಕಾಡುಪ್ರಾಣಿಗಳು, ಕಣ್ಣಿಗೆ ಕಟ್ಟುವ ಯುದ್ಧ ದೃಶ್ಯಗಳು ಮತ್ತು ಹಾಲಿವುʻಡ್ ದರ್ಜೆಯ ಸಿಜಿಐ-ವಿಎಫ್ಎಕ್ಸ್ ನಿಜಕ್ಕೂ ಮೈನವಿರೇಳಿಸುತ್ತವೆ. ಜಾಗತಿಕ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಮಾಡಿರುವ ಈ ಚಿತ್ರದಲ್ಲಿ ತಾಂತ್ರಿಕ ಶ್ರೀಮಂತಿಕೆಗೆ ಎಲ್ಲಿಯೂ ಕೊರತೆಯಿಲ್ಲ.
ರಾಮನಾಗಿ ರಣಬೀರ್ ಕಪೂರ್: ರಣಬೀರ್ ತಮ್ಮ ಎಂದಿನ ಸ್ಟಾರ್ ಇಮೇಜ್ ಬಿಟ್ಟು, ಪಾತ್ರಕ್ಕೆ ಬೇಕಾದ ಪ್ರಶಾಂತತೆ, ಗಾಂಭೀರ್ಯ ಮತ್ತು ದೃಢತೆಯನ್ನು ಅತ್ಯಂತ ಶ್ರದ್ಧೆಯಿಂದ ನಿಭಾಯಿಸಿದ್ದಾರೆ.
ರಾವಣನಾಗಿ ರಾಕಿಂಗ್ ಸ್ಟಾರ್ ಯಶ್: ತಮ್ಮ ಮೊದಲ ಹಿಂದಿ ಸಿನಿಮಾದಲ್ಲೇ ಯಶ್ ಎಂದೂ ಕಾಣದ ರೌದ್ರಾವತಾರದಲ್ಲಿ ಅಬ್ಬರಿಸಿದ್ದಾರೆ. ತೆರೆಯ ಮೇಲೆ ಅವರ ಸ್ಕ್ರೀನ್ ಪ್ರೆಸೆನ್ಸ್, ಅಹಂಕಾರ ಮತ್ತು ಅಜೇಯ ಶಕ್ತಿ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ವಿದ್ಯುತ್ಜಿಹ್ವನ ಜೊತೆಗಿನ ಕಾಳಗ ಹಾಗೂ ಜಟಾಯು ಜೊತೆಗಿನ ಆಕಾಶ ಕದನದಲ್ಲಿ ಯಶ್ ನಟನೆ ಪವರ್ಫುಲ್ ಆಗಿದೆ.
ಸೀತೆಯಾಗಿ ಸಾಯಿ ಪಲ್ಲವಿ: ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ ಮುಗ್ಧತೆ ಹಾಗೂ ಆಂತರಿಕ ಶಕ್ತಿಯನ್ನು ಅದ್ಭುತವಾಗಿ ತೆರೆದಿಟ್ಟಿದ್ದಾರೆ. ಲಕ್ಷ್ಮಣನಾಗಿ ರವಿ ದುಬೆ ಕೂಡ ಸಾಥ್ ನೀಡಿದ್ದಾರೆ.
ಚಿತ್ರದ ಬಹುದೊಡ್ಡ ಮೈನಸ್ ಎಂದರೆ, ದೃಶ್ಯ ವೈಭವದ ಅಬ್ಬರದಲ್ಲಿ ರಾಮಾಯಣದ ಮೂಲ ಭಾವನಾತ್ಮಕ ಆಳ ಮತ್ತು ಪಾತ್ರಗಳ ತೂಕ ಮಂಕಾಗಿದೆ. ಪ್ರತಿಯೊಂದು ಭಾರತೀಯ ಮನೆಗೂ ಕರತಲಾಮಲಕವಾಗಿರುವ ಈ ಕಥೆಯಲ್ಲಿ ಹೊಸತನವೇನೂ ಇಲ್ಲ . ಕೇವಲ ವೈಭವೋಪೇತ ದೃಶ್ಯಗಳನ್ನು ಒಂದರ ಹಿಂದೆ ಒಂದರಂತೆ ಜೋಡಿಸಿದಂತೆ ಭಾಸವಾಗುತ್ತದೆಯೇ ಹೊರತು, ನೋಡುಗರ ಹೃದಯವನ್ನು ಕಲಕುವ ಸೂಕ್ಷ್ಮ ಭಾವನೆಗಳು ಈ ಮೊದಲ ಭಾಗದಲ್ಲಿ ಕೊಂಚ ಕಣ್ಮರೆಯಾಗಿವೆ.
ಒಟ್ಟಾರೆಯಾಗಿ ಹೇಳುವುದಾದರೆ ಜಾಗತಿಕ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ಚಿತ್ರ ನಿರ್ಮಿಸಿರುವುದರಿಂದ, ಪ್ರತಿಯೊಂದು ಸನ್ನಿವೇಶವನ್ನೂ ಸರಳವಾಗಿ ವಿವರಿಸಲು ಹೋಗಿ ಕಥೆಯಲ್ಲಿರಬೇಕಾದ ಭಾವನಾತ್ಮಕ ತೀವ್ರತೆ ಮರೆಯಾಗಿದೆ. ಪರಿಚಿತ ಪಾತ್ರಗಳು ಹಲವು ಕಡೆ ನಿರ್ಜೀವವಾಗಿ ಕಾಣಿಸುವುದರೊಂದಿಗೆ, ಅದ್ಧೂರಿತನವೇ ಕಥೆಯನ್ನು ಆವರಿಸಿಕೊಂಡಿದೆ.
ಮೊದಲ ಭಾಗವು ಸೀತಾ ಅಪಹರಣ ಹಾಗೂ ಯುದ್ಧದ ಸಿದ್ಧತೆಯ ಹಂತಕ್ಕೆ ಬಂದು ನಿಲ್ಲಲಿದ್ದು, ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ಮುಂದಿನ ಭಾಗದಲ್ಲಿ ತೆರೆದುಕೊಳ್ಳಲಿದ್ದಾರೆ. ಒಟ್ಟಾರೆಯಾಗಿ, ಕಣ್ಣು ಕುಕ್ಕುವ ದೃಶ್ಯ ವೈಭವವನ್ನು ಬಯಸುವವರಿಗೆ ‘ರಾಮಾಯಣ’ ಒಂದು ದೃಶ್ಯ ಕಾವ್ಯವಾದರೂ, ಕಥೆಯ ಅಂತರಾಳದ ಭಾವನೆಗಳನ್ನು ಹುಡುಕುವವರಿಗೆ ಇದು ತುಸು ನಿರಾಸೆ ಮೂಡಿಸುವ ಸಾಧ್ಯತೆಯಿದೆ.






















