SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಒಂದೇ ದಿನದಲ್ಲಿ ಎರಡು ಮನೆ ಕಳವು: ಇಬ್ಬರು ಬಾಲಕರು ವಶಕ್ಕೆ

ಒಂದೇ ದಿನದಲ್ಲಿ ಎರಡು ಮನೆ ಕಳವು: ಇಬ್ಬರು ಬಾಲಕರು ವಶಕ್ಕೆ

0
4

ದಾವಣಗೆರೆ: ಸಂತೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಮನೆ ಕಳವು ಪ್ರಕರಣಗಳನ್ನು ಪೊಲೀಸರು ಒಂದೇ ದಿನದಲ್ಲಿ ಭೇದಿಸಿ, ಕಳುವಾಗಿದ್ದ ಅಂದಾಜು 2.13 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸಂತೇಬೆನ್ನೂರು ಗ್ರಾಮದ ದಿವ್ಯಶ್ರೀ ಎನ್ನುವವರು ಅ. 25ರಂದು ಬೆಂಗಳೂರಿಗೆ ತೆರಳಿದ್ದ ಸಂದರ್ಭದಲ್ಲಿ ಕಳ್ಳರು ಮನೆಯ ಮೇಲಿನ ಹಂಚು ತೆಗೆದು ಒಳನುಗ್ಗಿ, ಗಾಡ್ರೇಜ್ ಬೀರುವಿನ ಬಾಗಿಲು ಮುರಿದು ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದು ಕಳವು ಮಾಡಿದ್ದರು. ಈ ಕುರಿತು ಅ. 29ರಂದು ಅವರು ನೀಡಿದ ದೂರಿನ ಮೇರೆಗೆ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅದೇ ರೀತಿ, ಅ. 27ರಂದು ಮಮತಾ ಎನ್ನುವವರು ಕುಟುಂಬ ಸಮೇತ ತುಮಕೂರಿಗೆ ತೆರಳಿದ್ದ ಸಂದರ್ಭದಲ್ಲಿ ಕಳ್ಳರು ಮನೆಯ ಬಾಗಿಲ ಬೀಗ ಮುರಿದು ಒಳನುಗ್ಗಿ, ಬೀರುವಿನಲ್ಲಿದ್ದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಲಾಗಿತ್ತು.

ಎರಡೂ ಪ್ರಕರಣಗಳ ಪತ್ತೆಗಾಗಿ ಹೆಚ್ಚುವರಿ ಎಸ್ಪಿ ಪರಮೇಶ್ವರ ಹೆಗಡೆ, ಚನ್ನಗಿರಿ ಡಿವೈಎಸ್ಪಿ ರುದ್ರಪ್ಪ ಉಜ್ಜನಕೊಪ್ಪ ಹಾಗೂ ಸಂತೇಬೆನ್ನೂರು ಸಿಪಿಐ ಮಲ್ಲಮ್ಮ ಚೌಭೆ ಮಾರ್ಗದರ್ಶನದಲ್ಲಿ, ಠಾಣೆಯ ಪಿಎಸ್‌ಐ ನಾಗರಾಜ ಟಿ.ಎಂ. ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ತಂಡವು ಕಾರ್ಯಾಚರಣೆ ನಡೆಸಿ, ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಈ ವೇಳೆ ಮೊದಲ ಪ್ರಕರಣದಲ್ಲಿ ಕಳುವಾಗಿದ್ದ ಅಂದಾಜು 1,48,500 ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದು ಮತ್ತು ಎರಡನೇ ಪ್ರಕರಣದಲ್ಲಿ ಕಳುವಾಗಿದ್ದ ಅಂದಾಜು 65,000 ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.