BBK13: ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋನಲ್ಲಿ ದಿನದಿಂದ ದಿನಕ್ಕೆ ಸ್ಪರ್ಧಿಗಳ ನಡುವಿನ ಕಿತ್ತಾಟ ಹಾಗೂ ವೈಮನಸ್ಸು ತಾರಕ್ಕೇರುತ್ತಿದೆ. ಪ್ರಸ್ತುತ ಮನೆಯಲ್ಲಿ ನಡೆಯುತ್ತಿರುವ ನಾಮಿನೇಷನ್ ಪ್ರಕ್ರಿಯೆಯು ಬಿರುಗಾಳಿಯನ್ನೇ ಎಬ್ಬಿಸಿದ್ದು, ಧನುಷ್ ಹಾಗೂ ಸೌಂದರ್ಯಾ ಶೆಟ್ಟಿ ನಡುವಿನ ಮಾತಿನ ಸಮರ ಪ್ರೇಕ್ಷಕರ ಗಮನ ಸೆಳೆದಿದೆ. ಪ್ರತಿಯೊಬ್ಬ ಸ್ಪರ್ಧಿಗೂ ಇಬ್ಬರನ್ನು ನಾಮಿನೇಟ್ ಮಾಡುವ ಅಧಿಕಾರವಿದ್ದ ಹಿನ್ನೆಲೆಯಲ್ಲಿ, ಆಟದ ಪ್ರದರ್ಶನ ಕಡಿಮೆ ಇದೆ ಎಂದು ಆರೋಪಿಸಿ ಧನುಷ್ ಅವರು ಸೌಂದರ್ಯಾ ಅವರ ಹೆಸರನ್ನು ನಾಮಿನೇಷನ್ಗೆ ಸೂಚಿಸಿದರು.
ಧನುಷ್ ನೀಡಿದ ಈ ಕಾರಣದಿಂದ ತೀವ್ರ ಅಸಮಾಧಾನಗೊಂಡ ಸೌಂದರ್ಯಾ ಆರಂಭದಲ್ಲಿ ಮೌನ ವಹಿಸಿದ್ದರು. ಆದ್ರೆ ಸೌಂದರ್ಯಾ ಅವರ ಮೌನವನ್ನು ಕೆಣಕಲು ಹೋದ ಧನುಷ್, “ಏನಾದರೂ ಮಾತನಾಡಿ” ಎಂದು ಪದೇ ಪದೇ ಒತ್ತಾಯಿಸಿದರು. ಇದರಿಂದ ತಾಳ್ಮೆ ಕಳೆದುಕೊಂಡ ಸೌಂದರ್ಯಾ, “ನಾನು ನಿನಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ, ನೀನು ನನ್ನ ಪಾಲಿಗೆ ಸತ್ತು ಹೋಗಿದ್ದೀಯಾ” ಎಂದು ಮುಖಕ್ಕೆ ಹೊಡೆದಂತೆ ನೇರವಾಗಿ ತಿರುಗೇಟು ನೀಡಿದರು. ಬಳಿಕ ತಮ್ಮ ಸರದಿಯಲ್ಲಿ ಸೌಂದರ್ಯಾ ಕೂಡ ಧನುಷ್ ಅವರ ಹೆಸರನ್ನೇ ನಾಮಿನೇಟ್ ಮಾಡಿ ಆಕ್ರೋಶ ಹೊರಹಾಕಿದರು.
ಮತ್ತೊಂದೆಡೆ, ವಾರಾಂತ್ಯದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳ ಮೌನ ಮತ್ತು ತಪ್ಪುಗಳನ್ನು ತಿದ್ದಿದ್ದರೂ, ಮನೆಯಲ್ಲಿ ಅದೇ ಹಳೆಯ ಚಾಳಿ ಮುಂದುವರಿದಿದೆ. ಈ ವಾರ ನೀಡಲಾದ ರ್ಯಾಂಕಿಂಗ್ ಚಟುವಟಿಕೆಯಲ್ಲಿ ಕ್ಯಾಪ್ಟನ್ ಜಗದೀಶ್ ಅವರು ಗಾನವಿಗೆ ಮೊದಲ ಹಾಗೂ ಸೌಂದರ್ಯಾಗೆ ಎರಡನೇ ಸ್ಥಾನ ನೀಡಿದರು. ಆದ್ರೆ ಈ ನಿರ್ಧಾರವನ್ನು ಪ್ರಶ್ನಿಸದೆ ತಾಂಡವ್ ಸೇರಿದಂತೆ ಬಹುತೇಕ ಸ್ಪರ್ಧಿಗಳು ಸುಮ್ಮನೆ ಕುಳಿತುಕೊಂಡರು. ಸುದೀಪ್ ಅವರ ಎಚ್ಚರಿಕೆಯನ್ನು ಲೆಕ್ಕಿಸದೆ ಮತ್ತೆ ಮೌನ ವಹಿಸಿರುವ ಸ್ಪರ್ಧಿಗಳಿಗೆ ಮುಂಬರುವ ವಾರಾಂತ್ಯದ ಸಂಚಿಕೆಯಲ್ಲಿ ಕಿಚ್ಚನಿಂದ ಭಾರಿ ಕ್ಲಾಸ್ ಸಿಗುವುದು ಖಚಿತವಾಗಿದೆ.






















