BBK13: ‘ಬಿಗ್ ಬಾಸ್ ಕನ್ನಡ ಸೀಸನ್-13’ ಮನೆಯಲ್ಲಿ ಈ ವಾರದ ನಾಮಿನೇಷನ್ ಪ್ರಕ್ರಿಯೆಯು ದೊಡ್ಡ ಮಟ್ಟದ ಬಿರುಗಾಳಿಯನ್ನೇ ಎಬ್ಬಿಸಿದೆ. ಸಣ್ಣ ಸಣ್ಣ ತಪ್ಪುಗಳಿಗೂ ಸ್ಪರ್ಧಿಗಳು ಪರಸ್ಪರ ಸವಾಲು ಹಾಕಿಕೊಳ್ಳುತ್ತಿದ್ದು, ಮನೆಯಲ್ಲಿ ಯಾರು ಉಳಿಯಬೇಕು ಹಾಗೂ ಯಾರು ಹೊರಹೋಗಬೇಕು ಎಂಬ ಲೆಕ್ಕಾಚಾರ ತೀವ್ರಗೊಂಡಿದೆ. ಈ ಬಾರಿ ಸ್ಪರ್ಧಿಗಳ ಭಾವಚಿತ್ರಕ್ಕೆ ಕೊಡಲಿ ಚುಚ್ಚಿ ಕಾರಣ ನೀಡುವ ವಿಶಿಷ್ಟ ನಾಮಿನೇಷನ್ ಪ್ರಕ್ರಿಯೆಯನ್ನು ‘ಬಿಗ್ ಬಾಸ್’ ರೂಪಿಸಿದ್ದರು.
ಈ ಪ್ರಕ್ರಿಯೆಯಲ್ಲಿ ಕಿರಣ್ ಶಾಸ್ತ್ರಿ ವಿರುದ್ಧ ಸೋನಿಕಾ, ತಾಂಡವ್ ಹಾಗೂ ಯಶಸ್ ಸೇರಿದಂತೆ ಹಲವು ಸ್ಪರ್ಧಿಗಳು ಸಾಲು ಸಾಲು ಆರೋಪ ಮಾಡಿ ನಾಮಿನೇಟ್ ಮಾಡಿದರು. ಸೋನಿಕಾ “ಇಂಥವರು ಮನೆಯಲ್ಲಿರಲು ಯೋಗ್ಯರಲ್ಲ” ಎಂದರೆ, ತಾಂಡವ್ ಆಟದಲ್ಲಿ ಗಂಭೀರತೆಯಿಲ್ಲ ಎಂದರು. ಇದರಿಂದ ತೀವ್ರ ರೊಚ್ಚಿಗೆದ್ದ ಕಿರಣ್ ಶಾಸ್ತ್ರಿ, “ನಿಮ್ಮೆಲ್ಲರಿಗಿಂತ ಮಸ್ತಾಗಿ ಆಡಿದ್ದೀನಿ, ಇನ್ಮುಂದೆ ತೊಡೆ ತಟ್ಟಿ ನಿಲ್ಲುತ್ತೇನೆ, ಒಬ್ಬೊಬ್ಬರನ್ನೂ ಬಿಡಲ್ಲ” ಎಂದು ಬಹಿರಂಗ ಸವಾಲು ಹಾಕಿ ಮನೆಮಂದಿಗೆ ಶಾಕ್ ನೀಡಿದ್ದಾರೆ.
ಮತ್ತೊಂದೆಡೆ ಗಾನವಿ ಹಾಗೂ ಆಸಿಯಾ ನಡುವೆ ವೈಯಕ್ತಿಕ ಮಟ್ಟದ ವಾಗ್ವಾದ ನಡೆದಿದ್ದು, “ಹೊರಗಿನ ವಿಚಾರ ಬಿಚ್ಚಿಡಲೇ?” ಎಂದ ಗಾನವಿಗೆ “ಧಮ್ ಇದ್ದರೆ ಬಿಚ್ಚಿಡು” ಎಂದು ಆಸಿಯಾ ತಿರುಗೇಟು ನೀಡಿದರು. ಇತ್ತ ಸೌಂದರ್ಯ ಶೆಟ್ಟಿಯನ್ನು ಧನುಷ್ ನಾಮಿನೇಟ್ ಮಾಡಿದಾಗ, “ನೀನು ನನ್ನ ಪಾಲಿಗೆ ಸತ್ತೋಗಿದ್ದೀಯಾ, ಸತ್ತವರಂತೆಯೇ ಇರು” ಎಂದು ಸೌಂದರ್ಯ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.






















