ಬೆಂಗಳೂರು: ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ತಮ್ಮ ಹುಟ್ಟುಹಬ್ಬದ ಸಂಭ್ರಮದ ಸವಿನೆನಪಿನಲ್ಲಿ ಅಭಿಮಾನಿಗಳಿಗೆ ಅದ್ಭುತ ಉಡುಗೊರೆ ನೀಡಿದ್ದಾರೆ. ಅವರ ಬಹುನಿರೀಕ್ಷಿತ ಆಕ್ಷನ್ ಎಂಟರ್‌ಟೈನರ್ ‘ಕಿಂಗ್’ ಚಿತ್ರದ ಮೊದಲ ಹಾಡು ‘ತು ಮಿಲ್ ಜಾಯೆ’ ಬಿಡುಗಡೆಯಾಗಿದ್ದು, ಸಂಗೀತ ಮತ್ತು ಸಿನಿಮಾ ಪ್ರಿಯರಲ್ಲಿ ಹೊಸ ಸಂಚಲನ ಮೂಡಿಸಿದೆ. ಜಾಗತಿಕ ಮಟ್ಟದ ಪ್ರತಿಭೆಗಳನ್ನು ಒಟ್ಟುಗೂಡಿಸಿರುವ ಈ ಹಾಡಿನಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಜೋಡಿ ಮತ್ತೊಮ್ಮೆ ತಮ್ಮ ಅದ್ಭುತ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಮೂಲಕ ಮೋಡಿ ಮಾಡಿದೆ.
ಹಾಡು ಶಾರುಖ್ ಅವರ ಪವರ್‌ಫುಲ್ ಮಾಸ್ ಡೈಲಾಗ್‌ನೊಂದಿಗೆ ಪ್ರಾರಂಭವಾಗಲಿದ್ದು, ಅವರ ಪಾತ್ರದ ತೀವ್ರತೆಯನ್ನು ಪರಿಚಯಿಸುತ್ತದೆ. ಬಾಲಿವುಡ್‌ನ ಜನಪ್ರಿಯ ಗಾಯಕ ಅರಿಜಿತ್ ಸಿಂಗ್ ಅವರ ಕಂಠಸಿರಿ, ಜಾಗತಿಕ ಪಾಪ್ ಸೆನ್ಸೇಷನ್ ಎಡ್ ಶೀರನ್ ಅವರ ಇಂಗ್ಲಿಷ್ ರಾಪ್ ಶೈಲಿ ಹಾಗೂ ಮಧುಬಂತಿ ಬಾಗ್ಚಿ ಅವರ ಧ್ವನಿ ಈ ಹಾಡಿಗೆ ವಿಶೇಷ ಮೆರುಗು ನೀಡಿವೆ. ಸಚಿನ್-ಜಿಗರ್ ಸಂಗೀತ ಸಂಯೋಜನೆ ಹಾಗೂ ಕುಮಾರ್ ಸಾಹಿತ್ಯದಲ್ಲಿ ಮೂಡಿಬಂದಿರುವ ಈ ಟ್ರ್ಯಾಕ್‌ನಲ್ಲಿ ರೊಮ್ಯಾನ್ಸ್ ಮತ್ತು ಭರ್ಜರಿ ಆಕ್ಷನ್ ಮಿಶ್ರಣವಾಗಿದೆ.
ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಜೋಡಿಯ ರೋಮಾಂಚಕ ಅಭಿನಯ ಹಾಗೂ ಚುರುಕಾದ ಆಕ್ಷನ್ ದೃಶ್ಯಗಳು ಚಿತ್ರದ ಭವ್ಯತೆಯನ್ನು ಸಾಕ್ಷೀಕರಿಸುತ್ತವೆ. ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಮಾರ್ಫ್ಲಿಕ್ಸ್ ಪಿಕ್ಚರ್ಸ್ ಜಂಟಿಯಾಗಿ ನಿರ್ಮಿಸುತ್ತಿದ್ದು, 2026ರ ಡಿಸೆಂಬರ್ 24ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.






















