ಬೆಂಗಳೂರು: ಸ್ಯಾಂಡಲ್ವುಡ್ ನಟ ಧನ್ವೀರ್ ಗೌಡ ಹಾಗೂ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ಮುಸುಕಿನ ಗುದ್ದಾಟ ಇದೀಗ ಮತ್ತೊಂದು ತೀವ್ರ ಹಂತಕ್ಕೆ ತಲುಪಿದೆ. ಧನ್ವೀರ್ ನೀಡಿದ್ದಾರೆ ಎನ್ನಲಾದ ಬಹಿರಂಗ ಹೇಳಿಕೆಗಳ ವಿರುದ್ಧ ವಿಜಯಲಕ್ಷ್ಮಿ ಬೆಂಗಳೂರಿನ 37ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ACMM) ನ್ಯಾಯಾಲಯದಲ್ಲಿ ಖಾಸಗಿ ಮಾನನಷ್ಟ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ನಟ ಧನ್ವೀರ್ ತಮ್ಮ ತೇಜೋವಧೆ ಮಾಡುವಂತಹ ಹಾಗೂ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದು, ಅವು ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಪ್ರಸಾರವಾಗಿವೆ ಎಂದು ವಿಜಯಲಕ್ಷ್ಮಿ ಆರೋಪಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 356(2) ರ ಅಡಿಯಲ್ಲಿ ಮಾನನಷ್ಟ ಆರೋಪ ಹೊರಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಆಡಿಯೋ, ವಿಡಿಯೋ ಹಾಗೂ ಎಲೆಕ್ಟ್ರಾನಿಕ್ ದಾಖಲೆಗಳನ್ನು ಸಾಕ್ಷ್ಯವಾಗಿ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಅವರು ಮನವಿ ಮಾಡಿದ್ದಾರೆ. ಅಲ್ಲದೆ.. ಬಿಎನ್ಎಸ್ ಸೆಕ್ಷನ್ 222(1) ರ ಅಡಿಯಲ್ಲಿ ದೂರು ಪರಿಗಣಿಸಿ, ಧನ್ವೀರ್ ವಿರುದ್ಧ ಸಮನ್ಸ್ ಜಾರಿಗೊಳಿಸುವಂತೆ ಕೋರಿದ್ದಾರೆ.
ನಟ ದರ್ಶನ್ ಜೈಲು ಪಾಲಾದ ಸಂದರ್ಭದಲ್ಲಿ ಧನ್ವೀರ್ ಅವರು ವಿಜಯಲಕ್ಷ್ಮಿ ಕುಟುಂಬದ ಬೆಂಬಲಕ್ಕೆ ನಿಂತಿದ್ದರು. ಆದ್ರೆ ಇತ್ತೀಚೆಗೆ ಇಬ್ಬರ ನಡುವೆ ತೀವ್ರ ವೈಮನಸ್ಯ ಏರ್ಪಟ್ಟಿದ್ದು, “ವಿಜಯಲಕ್ಷ್ಮಿ ಅವರಿಗೆ ದರ್ಶನ್ ಜೈಲಿನಿಂದ ಹೊರಬರುವುದು ಇಷ್ಟವಿಲ್ಲ” ಎಂದು ಧನ್ವೀರ್ ಆರೋಪಿಸಿದ್ದರು. ಪ್ರತಿಯಾಗಿ ವಿಜಯಲಕ್ಷ್ಮಿ ಕೂಡ ಧನ್ವೀರ್ ವಿರುದ್ಧ ಹಣಕಾಸಿನ ವಂಚನೆ ಆರೋಪ ಹೊರಿಸಿದ್ದರು. ಇದೀಗ ಈ ರಂಪಾಟ ನ್ಯಾಯಾಲಯದ ಅಂಗಳ ತಲುಪಿದ್ದು, ಪ್ರಕರಣ ಕುತೂಹಲ ಕೆರಳಿಸಿದೆ.






















