SK Home Ad
Home ಸುದ್ದಿ ರಾಜ್ಯ ಕರ್ನಾಟಕದಲ್ಲಿ ಬಸ್ ಪ್ರಯಾಣ ದರ ಏರಿಕೆ ಫಿಕ್ಸ್‌? ನವೆಂಬರ್ 4ರಂದು ಅಂತಿಮ ನಿರ್ಧಾರ!

ಕರ್ನಾಟಕದಲ್ಲಿ ಬಸ್ ಪ್ರಯಾಣ ದರ ಏರಿಕೆ ಫಿಕ್ಸ್‌? ನವೆಂಬರ್ 4ರಂದು ಅಂತಿಮ ನಿರ್ಧಾರ!

0
28

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಬಸ್ ಪ್ರಯಾಣ ದರ ಏರಿಕೆ ಮಾಡುವ ಕುರಿತು ನವೆಂಬರ್ ಮೊದಲ ವಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ಗುರುವಾರ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಸಭೆಯಲ್ಲಿ ಬಸ್ ಪ್ರಯಾಣ ದರ ಹೆಚ್ಚಳದ ಕುರಿತು ವಿಸ್ತೃತ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.

ಪ್ರಯಾಣ ದರ ಹೆಚ್ಚಳ ಅನಿವಾರ್ಯ?: ಕೇಂದ್ರ ಸರ್ಕಾರ ಕಳೆದ ಒಂದು ವರ್ಷದಲ್ಲಿ ಐದು ಬಾರಿ ಡೀಸೆಲ್ ಸೇರಿದಂತೆ ಇತರ ತೈಲೋತ್ಪನ್ನಗಳ ದರ ಹೆಚ್ಚಳ ಮಾಡಿದೆ. ಇದರಿಂದ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಸಾರಿಗೆ ನಿಗಮಗಳ ಆರ್ಥಿಕ ಹೊರೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವುದರ ಜತೆಗೆ ಜನರಿಗೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಪ್ರಯಾಣ ದರ ಹೆಚ್ಚಳ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟ ಸಭೆಯಲ್ಲಿ ಎಲ್ಲ ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ. ಬಳಿಕ ಬಸ್ ಪ್ರಯಾಣ ದರ ಹೆಚ್ಚಳದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಜವಾಬ್ದಾರಿಯನ್ನು ಸಾರಿಗೆ ಇಲಾಖೆಗೆ ವಹಿಸಿದ್ದಾರೆ ಎಂದು ಹೇಳಿದರು.

ನವೆಂಬರ್ 4ರಂದು ಅಂತಿಮ ನಿರ್ಧಾರ: ಮುಖ್ಯಮಂತ್ರಿಗಳು ವಹಿಸಿರುವ ಜವಾಬ್ದಾರಿಯ ಹಿನ್ನೆಲೆಯಲ್ಲಿ ನವೆಂಬರ್ 3ರಂದು ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಈ ಸಭೆಯಲ್ಲಿ ಚರ್ಚಿಸಿದ ಬಳಿಕ ನವೆಂಬರ್ 4ರಂದು ಬಸ್ ಪ್ರಯಾಣ ದರ ಹೆಚ್ಚಳದ ಕುರಿತು ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ಬೈರತಿ ಸುರೇಶ್ ಮಾಹಿತಿ ನೀಡಿದರು.