SK Home Ad
Home ಸುದ್ದಿ ರಾಜ್ಯ ಪರಿಷತ್ ಚುನಾವಣೆ ಫಲಿತಾಂಶ, ಕಾಂಗ್ರೆಸ್ ಸರ್ಕಾರದ ಕೌಂಟ್‌ಡೌನ್ ಶುರು

ಪರಿಷತ್ ಚುನಾವಣೆ ಫಲಿತಾಂಶ, ಕಾಂಗ್ರೆಸ್ ಸರ್ಕಾರದ ಕೌಂಟ್‌ಡೌನ್ ಶುರು

0
157

ಬೆಂಗಳೂರು: ವಿಧಾನ ಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ನ ಎನ್‌ಡಿಎ ಕೂಟದ ಅಭ್ಯರ್ಥಿಗಳು ಎರಡು ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದು ಇನ್ನೆರಡು ಕ್ಷೇತ್ರಗಳಲ್ಲಿ ಗೆಲುವಿನ ಸನಿಹದಲ್ಲಿರುವುದು ಕಳೆದ ಮೂರೂವರೆ ವರ್ಷದ ಕಾಂಗ್ರೆಸಿನ ದುರಾಳಿತದ ಬಗ್ಗೆ ಜನ ಭ್ರಮನಿರಸನಗೊಂಡಿರುವುದು ಬಹಳ ಸ್ಪಷ್ಟ. ಕಾಂಗ್ರೆಸ್ ಸರ್ಕಾರದ ಕೌಂಟ್‌ಡೌನ್ ಶುರುವಾಗಿದ್ದು. ಸಿಎಂ ಡಿ.ಕೆ. ಶಿವಕುಮಾರ್ ಆಡಳಿತಕ್ಕೆ ಹಿಡಿದ ಕನ್ನಡಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರಾಜ್ಯದ ​ಸುಮಾರು 17 ಜಿಲ್ಲೆ ಮತ್ತು ಬೆಂಗಳೂರು ಮಹಾನಗರದಲ್ಲಿ ನಡೆದಂತಹ ಪದವೀಧರ ಮತ್ತು ಶಿಕ್ಷಕರ ವಿಧಾನ ಪರಿಷತ್ ಚುನಾವಣೆಯಲ್ಲಿ ​ಜನ ಕಾಂಗ್ರೆಸ್ ಅನ್ನು ತಿರಸ್ಕಾರ ಮಾಡಲು ಪ್ರಾರಂಭ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಕೌಂಟ್‌ಡೌನ್ ಪ್ರಾರಂಭವಾಗಿದೆ. ಇದು ಅಲ್ಲದೆ ಕಳೆದ ಮೂರು ತಿಂಗಳ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಡಳಿತಕ್ಕೂ ಕೂಡ ಹಿಡಿದಿರುವಂತಹ ಒಂದು ಸತ್ಯದ ಕನ್ನಡಿ ಎಂದು ಹೇಳಿದ್ದಾರೆ.

​ಭಾರತೀಯ ಜನತಾ ಪಕ್ಷ ಮತ್ತು ಜೆಡಿಎಸ್ ಬರುವಂತಹ ದಿನಗಳಲ್ಲಿ ಎಲ್ಲರೂ ಕೂಡ ಒಗ್ಗಟ್ಟಾಗಿ ಒಂದೇ ಧ್ವನಿಯಲ್ಲಿ ಕೆಲಸ ಮಾಡಿ ಜನಪರವಾದಂತಹ ಹೋರಾಟಗಳನ್ನು ಮಾಡಿದ್ದೆ ಆದರೆ, ಬರುವಂತಹ 2028ರ ವಿಧಾನಸಭಾ ಚುನಾವಣೆಯಲ್ಲಿ ಎರಡು ಮೂರು ಅಂಶ ಬಹುಮತ ನಮ್ಮ ಎನ್‌ಡಿಎ ಕೂಟಕ್ಕೆ ಬರುವುದು ಶತಸಿದ್ಧ ಎಂದು ತಿಳಿಸಿದ್ದಾರೆ.

​ಪದವೀಧರ ಮತ್ತು ಶಿಕ್ಷಕರ ಎಲ್ಲ ಮತದಾರರಿಗೂ ಕೂಡ ನಾನು ಹೃದಯಪೂರ್ವಕವಾದ ಧನ್ಯವಾದಗಳನ್ನು ಹೇಳುತ್ತೇನೆ ಮತ್ತು ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಅಲ್ಲದೇ ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಎನ್‌ಡಿಎ ನಾಯಕರು ಹಾಗೂ ಎರಡೂ ಪಕ್ಷಗಳ ಕಾರ್ಯಕರ್ತರಿಗೂ ಧನ್ಯವಾದ ಎಂದು ತಿಳಿಸಿದ್ದಾರೆ.