SK Home Ad
Home ಸುದ್ದಿ ರಾಜ್ಯ ಕರ್ನಾಟಕದ ಮತದಾರರ ಪಟ್ಟಿಯಿಂದ 99.32 ಲಕ್ಷ ಹೆಸರು ಡಿಲೀಟ್‌! ಅಂತಿಮ ಪಟ್ಟಿಯಲ್ಲಿ ಎಷ್ಟು ಮತದಾರರಿದ್ದಾರೆ?

ಕರ್ನಾಟಕದ ಮತದಾರರ ಪಟ್ಟಿಯಿಂದ 99.32 ಲಕ್ಷ ಹೆಸರು ಡಿಲೀಟ್‌! ಅಂತಿಮ ಪಟ್ಟಿಯಲ್ಲಿ ಎಷ್ಟು ಮತದಾರರಿದ್ದಾರೆ?

0
66

ಬೆಂಗಳೂರು: ಕರ್ನಾಟಕದಲ್ಲಿ 115 ದಿನಗಳ ಕಾಲ ನಡೆದ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಪೂರ್ಣಗೊಂಡಿದ್ದು, ರಾಜ್ಯದ ಮತದಾರರ ಪಟ್ಟಿಯಿಂದ ಒಟ್ಟು 99,32,303 ಹೆಸರುಗಳನ್ನು ತೆಗೆದುಹಾಕಲಾಗಿದೆ. ಈ ಕುರಿತು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ ಮಂಗಳವಾರ ಮಾಹಿತಿ ನೀಡಿದ್ದಾರೆ.

ಎಸ್‌ಐಆರ್‌ ಪ್ರಕ್ರಿಯೆಯ ಬಳಿಕ ಪ್ರಕಟಿಸಿರುವ ಅಂತಿಮ ಸಾಮಾನ್ಯ ಮತದಾರರ ಪಟ್ಟಿಯಲ್ಲಿ 4,54,55,680 ಮತದಾರರಿದ್ದಾರೆ. ಸೇವಾ ಮತದಾರರನ್ನೂ ಸೇರಿಸಿ ರಾಜ್ಯದಲ್ಲಿ ಒಟ್ಟು 4,55,00,011 ಮತದಾರರಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಅಂತಿಮ ಪಟ್ಟಿಯಲ್ಲಿ ಮಹಿಳಾ ಮತದಾರರೇ ಹೆಚ್ಚು: ಅಂತಿಮ ಮತದಾರರ ಪಟ್ಟಿಯಲ್ಲಿರುವವರ ಪೈಕಿ 2,25,50,493 ಪುರುಷರು, 2,29,12,355 ಮಹಿಳೆಯರು ಹಾಗೂ 2,841 ತೃತೀಯ ಲಿಂಗದ ಮತದಾರರಿದ್ದಾರೆ. ಮಹಿಳಾ ಮತದಾರರ ಸಂಖ್ಯೆ ಪುರುಷ ಮತದಾರರಿಗಿಂತ ಹೆಚ್ಚಿದೆ.

ರಾಜ್ಯದಲ್ಲಿ 18ರಿಂದ 19 ವರ್ಷ ವಯಸ್ಸಿನ 6,83,364 ಯುವ ಮತದಾರರು ಹಾಗೂ 85 ವರ್ಷ ಮೇಲ್ಪಟ್ಟ 3,92,134 ಹಿರಿಯ ಮತದಾರರಿದ್ದಾರೆ. ಅಂಗವೈಕಲ್ಯ ಹೊಂದಿರುವ 5,65,340 ಮತದಾರರೂ ಪಟ್ಟಿಯಲ್ಲಿದ್ದಾರೆ. ಇದರ ಜತೆಗೆ ಭಾರತೀಯ ಪೌರತ್ವ ಹೊಂದಿರುವ 3,252 ವಿದೇಶವಾಸಿ ಮತದಾರರ ವಿವರಗಳನ್ನೂ ಪಟ್ಟಿ ಒಳಗೊಂಡಿದೆ.

43.80 ಲಕ್ಷ ಮಂದಿಗೆ ನೋಟಿಸ್‌; 61,960 ಪ್ರಕರಣ ಬಾಕಿ: ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಒಟ್ಟು 43.80 ಲಕ್ಷ ಮಂದಿಗೆ ನೋಟಿಸ್‌ ನೀಡಲಾಗಿತ್ತು. ಈ ಪೈಕಿ 61,960 ಪ್ರಕರಣಗಳ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಅನ್ಬುಕುಮಾರ ತಿಳಿಸಿದ್ದಾರೆ.

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಫಾರ್ಮ್‌-7 ಅನ್ನು ಸಾಮೂಹಿಕವಾಗಿ ಸೃಷ್ಟಿಸಿಲ್ಲ. ಕಾನೂನಿನಲ್ಲೂ ಇಂತಹ ಸಾಮೂಹಿಕ ಪ್ರಕ್ರಿಯೆಗೆ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

2.29 ಲಕ್ಷ ಫಾರ್ಮ್‌-7 ಅರ್ಜಿ ಸಲ್ಲಿಕೆ: ಮತದಾರರ ಪಟ್ಟಿಯಲ್ಲಿನ ಹೆಸರುಗಳ ಅಳಿಸುವಿಕೆಗೆ ಸಂಬಂಧಿಸಿದಂತೆ ಒಟ್ಟು 2,29,235 ಫಾರ್ಮ್‌-7 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 1,88,324 ಪ್ರಕರಣಗಳನ್ನು ಪರಿಶೀಲಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ.

ಪರಿಶೀಲನಾ ಪ್ರಕ್ರಿಯೆಯಲ್ಲಿ ಅನರ್ಹರೆಂದು ಗುರುತಿಸಲಾದ 1,091 ಮತದಾರರು ಹಾಗೂ ವಿಚಾರಣೆಗೆ ಹಾಜರಾಗದ 184 ಮತದಾರರ ವಿವರಗಳೂ ಸೇರಿವೆ. ಆದರೆ, ಯಾವುದೇ ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ಅಳಿಸಿಲ್ಲ ಎಂದು ಅನ್ಬುಕುಮಾರ ಹೇಳಿದ್ದಾರೆ.

ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲ್ಪಟ್ಟಿರುವವರು ಮತ್ತೆ ಹೆಸರು ಸೇರ್ಪಡೆ ಮಾಡಿಕೊಳ್ಳಲು ಫಾರ್ಮ್‌-6 ಸಲ್ಲಿಸಬಹುದು ಎಂದು ಅವರು ತಿಳಿಸಿದ್ದಾರೆ.

ವಿವಿಧ ನಮೂನೆಗಳಲ್ಲಿ 26.23 ಲಕ್ಷ ಅರ್ಜಿ: ಎಸ್‌ಐಆರ್‌ ಹಾಗೂ ಮತದಾರರ ನೋಂದಣಿ ಪ್ರಕ್ರಿಯೆಯಡಿ ವಿವಿಧ ನಮೂನೆಗಳಲ್ಲಿ ಒಟ್ಟು 26,23,875 ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳ ವಿವರ ಹೀಗಿದೆ:

ಫಾರ್ಮ್‌-6: 10,62,336 ಅರ್ಜಿಗಳು
ಫಾರ್ಮ್‌-6ಎ: 4,972 ಅರ್ಜಿಗಳು
ಫಾರ್ಮ್‌-7: 2,29,235 ಅರ್ಜಿಗಳು
ಫಾರ್ಮ್‌-8: 13,27,432 ಅರ್ಜಿಗಳು

ಹೊಸ ಮತದಾರರ ನೋಂದಣಿ, ವಿದೇಶವಾಸಿ ಭಾರತೀಯರ ನೋಂದಣಿ, ಹೆಸರು ಅಳಿಸುವಿಕೆ ಹಾಗೂ ಮತದಾರರ ವಿವರಗಳ ತಿದ್ದುಪಡಿಗೆ ಸಂಬಂಧಿಸಿದಂತೆ ಈ ಅರ್ಜಿಗಳು ಸಲ್ಲಿಕೆಯಾಗಿವೆ.

ವಿದೇಶಿ ಮತದಾರರು, ಅಕ್ರಮ ವಲಸಿಗರ ಬಗ್ಗೆ ಅಧಿಕೃತ ಮಾಹಿತಿ ಇಲ್ಲ: ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದ್ದರೂ, ಪಟ್ಟಿಯಲ್ಲಿರುವ ವಿದೇಶಿ ಮತದಾರರು ಮತ್ತು ಅಕ್ರಮ ವಲಸಿಗರ ಅಧಿಕೃತ ಸಂಖ್ಯೆಯ ವಿವರಗಳು ಲಭ್ಯವಾಗಿಲ್ಲ ಎಂದು ಅನ್ಬುಕುಮಾರ ತಿಳಿಸಿದ್ದಾರೆ. ಈ ಕುರಿತು ಅಧಿಕೃತ ಅಂಕಿಅಂಶಗಳು ಇನ್ನೂ ಸ್ವೀಕೃತವಾಗಿಲ್ಲ. ಅಂತಹವರ ಸಂಖ್ಯೆ 1,000ಕ್ಕಿಂತ ಕಡಿಮೆ ಇರಬಹುದು ಎಂದು ಅವರು ಅಂದಾಜಿಸಿದ್ದಾರೆ.

ಅಂತಿಮ ಪಟ್ಟಿ ಪ್ರಕಟವಾದರೂ ಹೆಸರು ಸೇರ್ಪಡೆಗೆ ಅವಕಾಶ: ಅಂತಿಮ ಮತದಾರರ ಪಟ್ಟಿ ಪ್ರಕಟವಾದ ಮಾತ್ರಕ್ಕೆ ಹೊಸದಾಗಿ ಹೆಸರು ನೋಂದಾಯಿಸಿಕೊಳ್ಳುವ ಅವಕಾಶ ಮುಕ್ತಾಯವಾಗುವುದಿಲ್ಲ. ಮತದಾರರ ನೋಂದಣಿ ನಿರಂತರ ಪ್ರಕ್ರಿಯೆಯಾಗಿದ್ದು, ಅರ್ಹ ನಾಗರಿಕರು ಫಾರ್ಮ್‌-6 ಸಲ್ಲಿಸುವ ಮೂಲಕ ತಮ್ಮ ಹೆಸರನ್ನು ಪಟ್ಟಿಗೆ ಸೇರಿಸಿಕೊಳ್ಳಬಹುದು ಎಂದು ಮುಖ್ಯ ಚುನಾವಣಾಧಿಕಾರಿ ಮನವಿ ಮಾಡಿದ್ದಾರೆ.

ಮತದಾನದ ಹಕ್ಕು ಹೊಂದಿರುವ ಅರ್ಹ ನಾಗರಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಹೆಸರು ಇಲ್ಲದಿದ್ದರೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.