SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಕೈಗಾ-ಕಾರವಾರ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ನಿರ್ಬಂಧ ತೆರವು; ಪ್ರತಿ ಆಕ್ಸಲ್‌ಗೆ 15 ಟನ್ ಮಿತಿ

ಕೈಗಾ-ಕಾರವಾರ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ನಿರ್ಬಂಧ ತೆರವು; ಪ್ರತಿ ಆಕ್ಸಲ್‌ಗೆ 15 ಟನ್ ಮಿತಿ

0
86
ಕೈಗಾ-5, 6ನೇ ಘಟಕಗಳ ಕಾಮಗಾರಿಗೆ ವೇಗ: ಭಾರಿ ವಾಹನಗಳ ಸಂಚಾರಕ್ಕೆ ಜಿಲ್ಲಾಧಿಕಾರಿ ಅನುಮತಿ

ಕೈಗಾ ಯೋಜನೆಗೆ ಸಾಮಗ್ರಿ ಸಾಗಣೆ : ಹೆದ್ದಾರಿ ಸಂಚಾರದ ಹೊಣೆ ಎನ್‌ಪಿಸಿಐಎಲ್‌ಗೆ – ಪ್ರತಿ ಆಕ್ಸಲ್‌ಗೆ 15 ಭಾರ ಸಾಗಣೆಗೆ ಮಾತ್ರ ಅವಕಾಶ.

ದಾಂಡೇಲಿ. (ಉತ್ತರ ಕನ್ನಡ) ಸಂ.ಕ. ಸಮಾಚಾರ : ಕಾರವಾರದ ಕೈಗಾ ಅಣು ವಿದ್ಯುತ್ ಯೋಜನೆಯ 5 ಮತ್ತು 6ನೇ ಘಟಕಗಳ ಕಾಮಗಾರಿಗೆ ಅಗತ್ಯವಾದ ನಿರ್ಮಾಣ ಸಾಮಗ್ರಿಗಳ ಸಾಗಣೆಗೆ ಅನುಕೂಲವಾಗುವಂತೆ, ಕೈಗಾ-ಕಾರವಾರ ರಾಜ್ಯ ಹೆದ್ದಾರಿಯಲ್ಲಿ ಭಾರಿ ವಾಹನಗಳ ಸಂಚಾರದ ಮೇಲಿನ ನಿರ್ಬಂಧವನ್ನು ಜಿಲ್ಲಾಧಿಕಾರಿಗಳು ತೆರವುಗೊಳಿಸಿದ್ದಾರೆ. ಆದರೆ, ಪ್ರತಿ ಆಕ್ಸಲ್‌ಗೆ ಗರಿಷ್ಠ 15 ಮೆಟ್ರಿಕ್ ಟನ್ ಭಾರ ಸಾಗಿಸುವ ಷರತ್ತು ವಿಧಿಸಲಾಗಿದ್ದು, ಇದನ್ನು ಪಾಲಿಸುವ ಜವಾಬ್ದಾರಿಯನ್ನು ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಪಿಸಿಐಎಲ್) ವಹಿಸಿಕೊಂಡಿದೆ.

ರಾಷ್ಟ್ರೀಯ ಪ್ರಾಮುಖ್ಯತೆಯ ಕೈಗಾ-5 ಮತ್ತು 6ನೇ ಘಟಕಗಳ ಕಾಮಗಾರಿಯನ್ನು 2031-32ರ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆಗೆ ಅಗತ್ಯವಾದ ನಿರ್ಮಾಣ ಸಾಮಗ್ರಿಗಳು ಮತ್ತು ಇತರ ಸರಕುಗಳ ಸಾಗಣೆಗೆ ಕೈಗಾ-ಕಾರವಾರ ರಾಜ್ಯ ಹೆದ್ದಾರಿ (ಎಸ್‌ಎಚ್‌-06) ಪ್ರಮುಖ ಸಂಪರ್ಕ ಮಾರ್ಗವಾಗಿದೆ.

ಹಿಂದೆ ಹೆದ್ದಾರಿಯ ಸ್ಥಿತಿ ಹದಗೆಟ್ಟಿದ್ದರಿಂದ ಜಿಲ್ಲಾಧಿಕಾರಿಗಳು ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ, ರಸ್ತೆ ದುರಸ್ತಿ ಮಾಡುವಂತೆ ಎನ್‌ಪಿಸಿಐಎಲ್‌ಗೆ ಸೂಚಿಸಿದ್ದರು. ಅದರಂತೆ ದುರಸ್ತಿ ಕಾರ್ಯ ಪೂರ್ಣಗೊಂಡ ಬಳಿಕ ಜಿಲ್ಲಾ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಸ್ತೆ ಪರಿಶೀಲನೆ ನಡೆಸಿದ್ದಾರೆ. ನಂತರ ಅಕ್ಟೋಬರ್ 16ರಂದು ಜಿಲ್ಲಾಧಿಕಾರಿಗಳು ಸಂಚಾರ ನಿರ್ಬಂಧ ತೆರವುಗೊಳಿಸಿದ್ದಾರೆ.

ಹೆದ್ದಾರಿಯ ಕೇರವಡಿ-ಮಲ್ಲಾಪುರ ಭಾಗದ ಪುನರ್‌ನಿರ್ಮಾಣ ಮತ್ತು ವಿಸ್ತರಣಾ ಕಾಮಗಾರಿಯನ್ನು ಎನ್‌ಪಿಸಿಐಎಲ್ ಗುತ್ತಿಗೆ ನೀಡಿದ್ದು, ಕಾಮಗಾರಿ ಪ್ರಸ್ತುತ ಪ್ರಗತಿಯಲ್ಲಿದೆ.

ಜಿಲ್ಲಾಧಿಕಾರಿಗಳು ವಿಧಿಸಿರುವ ಷರತ್ತುಗಳಿಗೆ ಅನುಗುಣವಾಗಿ ವಾಹನಗಳ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಸಂಸ್ಥೆ ಕೈಗೊಳ್ಳುತ್ತಿದೆ. ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುವ ವಾಹನಗಳಲ್ಲಿ ಪ್ರತಿ ಆಕ್ಸಲ್‌ಗೆ 15 ಮೆಟ್ರಿಕ್ ಟನ್‌ಗಳ ಮಿತಿಯನ್ನು ಮೀರದಂತೆ ಭಾರ ಇರುವುದನ್ನು ಖಚಿತಪಡಿಸಿಕೊಳ್ಳುತ್ತಿದೆ.

ಮುಂದಿನ ದಿನಗಳಲ್ಲಿ ರಸ್ತೆಗೆ ಮತ್ತೆ ದುರಸ್ತಿ ಅಗತ್ಯವಿದ್ದಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆಯೂ ಜಿಲ್ಲಾಧಿಕಾರಿ ಸೂಚಿಸಿದ್ದಾರೆ ಎಂದು ಎನ್‌ಪಿಸಿಐಎಲ್ ಪ್ರಕಟಣೆ ತಿಳಿಸಿದೆ.