SK Home Ad
Home ಸುದ್ದಿ ರಾಜ್ಯ ವಿದೇಶದ ಬಳಿಕ ಈಗ ದೇಶದೊಳಗಿಂದಲೇ ಮಾಜಿ ಡಿಸಿಎಂಗೆ ಬೆದರಿಕೆ!

ವಿದೇಶದ ಬಳಿಕ ಈಗ ದೇಶದೊಳಗಿಂದಲೇ ಮಾಜಿ ಡಿಸಿಎಂಗೆ ಬೆದರಿಕೆ!

0
5

ಶಿವಮೊಗ್ಗ: ಈ ಹಿಂದೆ ವಿದೇಶಗಳಿಂದ ಬೆದರಿಕೆ ಕರೆಗಳನ್ನು ಸ್ವೀಕರಿಸುತ್ತಿದ್ದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ಇದೀಗ ದೇಶದೊಳಗಿಂದಲೇ ಬೆದರಿಕೆ ಕರೆಗಳು ಬರಲು ಶುರುವಾಗಿವೆ. ಅ. 17ರಂದು ಇಬ್ಬರು ಅನ್ಯಕೋಮಿನ ವ್ಯಕ್ತಿಗಳು ಬೆದರಿಕೆ ಕರೆ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಅವರಿಗೆ ಸೋಮವಾರ ದೂರು ನೀಡಲಾಗಿದೆ.

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ರಾಷ್ಟ್ರಭಕ್ತ ಬಳಗದವರ ಜೊತೆ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಗೆ ತೆರಳಿ, ತಮಗೆ ರಕ್ಷಣೆ ಒದಗಿಸುವಂತೆ ಎಸ್‌ಪಿ ಬಿ. ನಿಖಿಲ್ ಅವರಿಗೆ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ಅ. 17ರಂದು ರಾತ್ರಿ 8.49ರ ವೇಳೆಗೆ ರಿಜ್ವಾನ್ ಬೇಗ್ ಎನ್ನುವ ವ್ಯಕ್ತಿ ಕರೆ ಮಾಡಿದ್ದಾನೆ. ಆತ ಮಾತನಾಡುವ ರೀತಿ ನೋಡಿ ನಾನು ಅವನ ಬಳಿ ಒರಟಾಗಿ ಮಾತನಾಡಿದೆ. ಆತ ನಾನು ಆಮೇಲೆ ಕಾಲ್ ಮಾಡುತ್ತೇನೆ ಎಂದವನು ಕಾಲ್ ಮಾಡಲೇ ಇಲ್ಲ.

ಇನ್ನೊಬ್ಬ ಡಿಜಿಟಲ್ ಫರಾನ್ ರಶೀದ್ ಎಂಬಾತ ಸುಮಾರು 10.49ರ ವೇಳೆಗೆ ಫೋನ್ ಮಾಡಿದ್ದಾನೆ. ಆ ಸಂದರ್ಭದಲ್ಲಿ ನಾನು ನನ್ನ ಕುಟುಂಬದೊಂದಿಗೆ ಸಿನಿಮಾ ಟಾಕೀಸ್‌ನಲ್ಲಿ ಕೂತಿದ್ದೆ. ಆಗ ಫೋನ್ ಮಾಡಿ, ನೀವು ಈಶ್ವರಪ್ಪನವರಲ್ಲವಾ, ಮಾಜಿ ಡಿಸಿಎಂ ಅಲ್ವಾ? ಎಂದು ಕೇಳಿದ್ದಾನೆ. ಹೌದು ಎಂದಿದ್ದಕ್ಕೆ, ನೀವು ಈ ಹಿಂದೆ ಸಚಿವ ಜಮೀರ್ ಅಹಮದ್ ಬಗ್ಗೆ ಏನೇನೋ ಮಾತನಾಡಿದ್ದೀರಿ, ನಮ್ಮ ಬಳಿ ದಾಖಲೆ ಇದೆ, ನಿಮಗೆ ಕಳುಹಿಸಿ ಕೊಡುತ್ತೇವೆ ಎಂದು ಹೇಳಿದ್ದಾನೆ.

ಆತ ಜಮೀರ್ ಅಹಮದ್ ಪರ ಮಾತನಾಡಿದ್ದಾನೋ, ವಿರುದ್ಧ ಮಾತನಾಡಿದ್ದಾನೋ ಗೊತ್ತಿಲ್ಲ, ಒಬ್ಬ ಹಿಂದಿಯಲ್ಲಿ ಮಾತನಾಡಿದ್ದಾನೆ ಇನ್ನೊಬ್ಬ ಕನ್ನಡದಲ್ಲಿ ಮಾತನಾಡಿದ್ದಾನೆ, ಒಟ್ಟಿನಲ್ಲಿ ನನಗೆ ಬೆದರಿಕೆ ಒಡ್ಡುವ ರೀತಿಯಲ್ಲಿ ಮಾತನಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರಕ್ಷಣೆ ಒದಗಿಸುವಂತೆ ಪೊಲೀಸರಿಗೆ ಮನವಿ ಸಲ್ಲಿಸಿದ್ದೇನೆ ಎಂದು ತಿಳಿಸಿದರು.