SK Home Ad
Home ಸಿನಿ ಮಿಲ್ಸ್ ಉತ್ತರ ಕರ್ನಾಟಕದ ಸೊಗಡಿನ ‘ಹುಬ್ಬಳ್ಳಿ ಹಂಟರ್ಸ್‌’ ಬಿಡುಗಡೆ ದಿನಾಂಕ ಫಿಕ್ಸ್‌

ಉತ್ತರ ಕರ್ನಾಟಕದ ಸೊಗಡಿನ ‘ಹುಬ್ಬಳ್ಳಿ ಹಂಟರ್ಸ್‌’ ಬಿಡುಗಡೆ ದಿನಾಂಕ ಫಿಕ್ಸ್‌

0
67
ಉತ್ತರ ಕರ್ನಾಟಕದ ಸೊಗಡಿನ ಹಾರರ್‌-ಕಾಮಿಡಿ ‘ಹುಬ್ಬಳ್ಳಿ ಹಂಟರ್ಸ್‌’: ಚಿತ್ರಮಂದಿರಕ್ಕೆ ಬರಲು ಸಜ್ಜು

ಹುಬ್ಬಳ್ಳಿ: ಉತ್ತರ ಕರ್ನಾಟಕದ ಸಂಸ್ಕೃತಿ, ಸ್ಥಳೀಯ ಹಾಸ್ಯ ಮತ್ತು ಹಾರರ್‌ ಅಂಶಗಳನ್ನು ಒಳಗೊಂಡ ಕನ್ನಡ ಸಿನಿಮಾ ‘ಹುಬ್ಬಳ್ಳಿ ಹಂಟರ್ಸ್‌’ ಡಿಸೆಂಬರ್‌ 11, 2026ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ‘ಬೆಲ್‌ ಬಾಟಮ್‌’ ಚಿತ್ರದ ನಿರ್ಮಾಪಕ ಸಂತೋಷ್‌ ಕುಮಾರ್‌ ಕೆ.ಸಿ. ಅವರ ನಿರ್ಮಾಣದಲ್ಲಿ, ಗೋಲ್ಡನ್‌ ಹಾರ್ಸ್‌ ಸಿನಿಮಾ ಬ್ಯಾನರ್‌ನಡಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಸಮರ್ಥ್‌ ಬಿ. ಕಡಕೊಳ್‌ ನಿರ್ದೇಶನ ನೀಡಿದ್ದಾರೆ.

ಹುಬ್ಬಳ್ಳಿ, ಶಿರಸಿ, ಧಾರವಾಡದಲ್ಲಿ ಚಿತ್ರೀಕರಣ : ಚಿತ್ರದ ಕಥೆಗೆ ಸ್ಥಳೀಯ ವಾತಾವರಣದ ನೈಜತೆ ನೀಡಲು ಹುಬ್ಬಳ್ಳಿ, ಶಿರಸಿ ಮತ್ತು ಧಾರವಾಡದ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹುಬ್ಬಳ್ಳಿಯಲ್ಲಿ 14 ದಿನಗಳು, ಶಿರಸಿಯಲ್ಲಿ 22 ದಿನಗಳು ಮತ್ತು ಧಾರವಾಡದಲ್ಲಿ ಎರಡು ದಿನಗಳ ಕಾಲ ಚಿತ್ರೀಕರಣ ನಡೆದಿದ್ದು, ಜುಲೈ ವೇಳೆಗೆ ಚಿತ್ರೀಕರಣ ಪೂರ್ಣಗೊಂಡಿತ್ತು. ಆಗಸ್ಟ್‌ನಲ್ಲಿ ಡಬ್ಬಿಂಗ್‌ ಕೆಲಸವೂ ಮುಗಿದಿತ್ತು. ಇದೀಗ ಚಿತ್ರತಂಡ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ.

ಪ್ರಮುಖ ಪಾತ್ರಗಳಲ್ಲಿ ಜನಪ್ರಿಯ ಕಲಾವಿದರು : ಚಿತ್ರದಲ್ಲಿ ಖ್ಯಾತ ನಟರಾದ ಶ್ರೀ ಪ್ರಮೋದ್ ಶೆಟ್ಟಿ,ಚೇತನ್ ಮಾರಂಬೀಡ್, ಪವನ್ ಕುಲಕರ್ಣಿ, ಸುಮಿತ್ ಸಂಕೋಜಿ, ನಮನ್ ಅರೋರ, ಧನ್ಯಶ್ರೀ ಸುಜಿತ್, ವನು ಪಾಟೀಲ್ ದೀಪಕ್ ರಾವ್, ಶಿವು ಗುಂಡಣ್ಣನವರ್, ವಿನಯ್ ದೊಡ್ಡಮನಿ,ಪವನ್ ಅಣ್ಣೆಗೇರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆಗೆ ಕನ್ನಡ ಚಿತ್ರರಂಗದ ಖ್ಯಾತ ನಟರಾದ ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ಹಿರಿಯ ಕಲಾವಿದರಾದ ಶ್ರೀ ರಮೇಶ್ ಭಟ್ ಚಿತ್ರದ ತಾರಾಗಣದಲ್ಲಿದ್ದು, ತಮ್ಮ ಅನುಭವಿ ಅಭಿನಯದ ಮೂಲಕ ಸಿನಿಮಾದ ತೂಕ ಹೆಚ್ಚಿಸಲಿದ್ದಾರೆ. ಈ ಚಿತ್ರದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಜನಪ್ರಿಯತೆ ಗಳಿಸಿರುವ ಕಂಟೆಂಟ್ ಕ್ರಿಯೇಟರ್ಸ್‌ ದೊಡ್ಡ ಪರದೆಯ ಮೇಲೆ ಬಣ್ಣ ಹಚ್ಚುತ್ತಿರುವುದು ವಿಶೇಷ.

ಗಮನ ಸೆಳೆದ ‘ಐಮ್ಯಾಕ್ಸ್‌ನಲ್ಲಿ ಅನುಭವಿಸಲು ಸಾಧ್ಯವಿಲ್ಲ’ ಎಂಬ ಟ್ಯಾಗ್‌ಲೈನ್‌ : ಚಿತ್ರದ ಬಿಡುಗಡೆ ಪ್ರಕಟಣೆಯೊಂದಿಗೆ ಹೊರಬಂದ ಪೋಸ್ಟರ್‌ಗಳು ಮತ್ತು ಅದರ ವಿಶಿಷ್ಟ ಟ್ಯಾಗ್‌ಲೈನ್‌ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿವೆ. “ನೀವು ಐಮ್ಯಾಕ್ಸ್‌ನಲ್ಲಿ ಅದನ್ನು ಅನುಭವಿಸಲು ಸಾಧ್ಯವಿಲ್ಲ” ಎಂಬ ಹಾಸ್ಯಮಯ ಸಾಲು ಮೀಮ್‌ಗಳ ರೂಪದಲ್ಲೂ ಗಮನ ಸೆಳೆದಿದೆ.

ನಿರ್ದೇಶಕ ಸಮರ್ಥ್ ಬಿ. ಕಡಕೊಳ್ ಅವರೇ ಈ ಚಿತ್ರಕ್ಕೆ ಕಥೆ ಬರೆದಿದ್ದು, ರಾಹುಲ್ ವಿ. ಪಾರ್ವತಿಕರ್, ಅಮಿತ್ ಕಾರ್ವ್ಕರ್ ಮತ್ತು ಚೇತನ್ ಮರಂಬೀದ್ ಅವರೊಂದಿಗೆ ಜಂಟಿಯಾಗಿ ಸಂಭಾಷಣೆ ಹೆಣೆದಿದ್ದಾರೆ. ತಾಂತ್ರಿಕವಾಗಿಯೂ ಸಿನಿಮಾ ಶ್ರೀಮಂತವಾಗಿ ಮೂಡಿಬಂದಿದ್ದು, ಅಭಿಮನ್ಯು ಸದಾನಂದನ್ ಅವರ ಛಾಯಾಗ್ರಹಣ ಹಾಗೂ ಪ್ರಸನ್ನ ಕೇಶವ ಅವರ ಸಂಗೀತ ನಿರ್ದೇಶನ, ಹಿನ್ನೆಲೆ ಸಂಗೀತ ನಿರ್ದೇಶನ ಸುಜಿತ್ ಶ್ರೀಧರ್, ಕಲಾ ನಿರ್ದೇಶನ ಧರಣಿ ಗಂಗೆಪುತ್ರ, ಸಂಕಲನ ಸುರೇಶ್ ಮಲ್ಲಯ್ಯ, ಆಕಾಶ್ ಹಿರೇಮಠ ಚಿತ್ರಕ್ಕಿದೆ. ಸದ್ಯ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿರುವ ಚಿತ್ರತಂಡ, ಶೀಘ್ರದಲ್ಲೇ ಟೀಸರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ.

ಡಿಸೆಂಬರ್‌ 11ರಂದು ಬಿಡುಗಡೆಯಾಗಲಿರುವ ‘ಹುಬ್ಬಳ್ಳಿ ಹಂಟರ್ಸ್‌’ ಪ್ರೇಕ್ಷಕರನ್ನು ಎಷ್ಟು ರಂಜಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.