SK Home Ad
Home ನಮ್ಮ ಜಿಲ್ಲೆ ಚಿತ್ರದುರ್ಗ ಮೀಸಲಾತಿ ಹೆಚ್ಚಳ ರದ್ದಾಗಲು ಕಾಂಗ್ರೆಸ್ ಸರ್ಕಾರವೇ ಕಾರಣ: ಗೋವಿಂದ ಕಾರಜೋಳ ಆರೋಪ

ಮೀಸಲಾತಿ ಹೆಚ್ಚಳ ರದ್ದಾಗಲು ಕಾಂಗ್ರೆಸ್ ಸರ್ಕಾರವೇ ಕಾರಣ: ಗೋವಿಂದ ಕಾರಜೋಳ ಆರೋಪ

0
72
(File Photo)

ಚಿತ್ರದುರ್ಗ: ಬಸವರಾಜ ಬೊಮ್ಮಾಯಿ ಸರ್ಕಾರ ಜಾರಿ ಮಾಡಿದ್ದ ಮೀಸಲಾತಿ ಹೆಚ್ಚಳ ಆದೇಶ ಕೋರ್ಟ್ ರದ್ದುಪಡಿಸಲು ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯವೇ ಕಾರಣ ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.

ಚಿತ್ರದುರ್ಗದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಅಡ್ವೊಕೇಟ್ ಜನರಲ್ ಕೋರ್ಟ್‌ನಲ್ಲಿ ಸೂಕ್ತ ವಾದ ಮಂಡಿಸುವಲ್ಲಿ ವಿಫಲರಾಗಿದ್ದಾರೆ, ಅಗತ್ಯ ದತ್ತಾಂಶ ನೀಡದೆ ಸರ್ಕಾರ ಎಡವಿದೆ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರ ಈಗಾಗಲೇ ಶೇ.50ರಷ್ಟಿದ್ದ ಮೀಸಲಾತಿ ಮಿತಿಯನ್ನು ಬದಲಿಸಿ, ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿ ನೀಡಿ ದೇಶದಲ್ಲಿ ಒಟ್ಟು ಶೇ.60ಕ್ಕೆ ಮೀಸಲಾತಿ ಹೆಚ್ಚಳ ಮಾಡಿದೆ. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಹೆಚ್ಚಳ ಆಗಬೇಕು. 2024ರಿಂದ 2026ರವರೆಗೆ ಎಸ್ಸಿ ಶೇ.17, ಎಸ್ಟಿ ಶೇ.7ರಷ್ಟು ಮೀಸಲಾತಿ ಇತ್ತು. ಈ ಹೆಚ್ಚಳ ರದ್ದಾಗಿರುವುದು ದಲಿತರ ತಲೆಯ ಮೇಲೆ ಕಲ್ಲು ಹಾಕಿದಂತಾಗಿದೆ ಎಂದು ಕಾರಜೋಳ ಹೇಳಿದರು.

ಸರ್ಕಾರ ಈ ಬಗ್ಗೆ ಕಾನೂನು ಹೋರಾಟ ಮಾಡಬೇಕು, ಇಲ್ಲವಾದರೆ ನಾವು ಪಕ್ಷಾತೀತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಡಿಸಿಎಂ ಡಾ. ಜಿ. ಪರಮೇಶ್ವರ್ ಮತ್ತು ಸಚಿವ ಕೆ.ಎಚ್. ಮುನಿಯಪ್ಪ ರಾಜೀನಾಮೆ ನೀಡಬೇಕು, ಅವರು ನಮ್ಮೊಂದಿಗೆ ಹೋರಾಟಕ್ಕೆ ಬರಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಸರ್ಕಾರ, ಡಿಕೆಶಿ ಸರ್ಕಾರದಲ್ಲಿ ದಲಿತರಿಗೆ ಮೋಸವಾಗುತ್ತಿದೆ. ಅನೇಕ ರಾಜ್ಯಗಳಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳವಾಗಿದೆ. ಆದರೆ ಕಾಂಗ್ರೆಸ್ ಸರ್ಕಾರಕ್ಕೆ, ಸಿದ್ದರಾಮಯ್ಯ, ಡಿಕೆಶಿಗೆ ಇಚ್ಛಾಶಕ್ತಿ ಮತ್ತು ಕಾಳಜಿ ಇಲ್ಲದ ಕಾರಣ ರದ್ದಾಗಿದೆ. ಕಾಂಗ್ರೆಸ್ ಸಾಕಿದ ಕೆಲವು ಗಿಳಿಗಳು ಕೂಗುತ್ತಿರುತ್ತವೆ ಎಂದು ವ್ಯಂಗ್ಯವಾಡಿದರು.

ಲಂಬಾಣಿ, ಬೋವಿ, ಕೊರಚ, ಕೊರಮ ಜಾತಿಗಳನ್ನು ಎಸ್ಸಿ ಪಟ್ಟಿಯಿಂದ ತೆಗೆಯಬೇಕು ಎಂಬ ಚಲವಾದಿ ಬಸವನಾಗಿದೇವ ಶ್ರೀಗಳ ಹೇಳಿಕೆಗೆ ತಿರುಗೇಟು ನೀಡಿದ ಕಾರಜೋಳ, ಜ್ಞಾನ ಇಲ್ಲದೆ ಯಾರೋ ಏನೋ ಹೇಳಿದರೆ ನಾನು ಮಾತನಾಡಲಾರೆ. ಸ್ವಾಮೀಜಿ ಏನೋ ಹೇಳಿದರೆ ನಾನು ಉತ್ತರಿಸಲಾಗದು. ಲಂಬಾಣಿ, ಬೋವಿ, ಕೊರಚ, ಕೊರಮ ಸ್ಪೃಶ್ಯ ಜಾತಿಗಳು, ಅವುಗಳನ್ನು ಎಸ್ಸಿ ಪಟ್ಟಿಯಿಂದ ಕೈಬಿಡುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ನಮ್ಮ ಆಡಳಿತದಲ್ಲಿ ಶಿಫಾರಸ್ಸು ಮಾಡಿ ಕಳುಹಿಸಿದ್ದೇವೆ ಎಂದು ಹೇಳಿದರು.

ರಾಹುಲ್ ಗಾಂಧಿಗೆ ಇಂದಿಗೂ ಬ್ರಿಟಿಷ್ ಪೌರತ್ವ ಇದೆ. ವಿದೇಶಿ ಪೌರತ್ವದ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸಲು ಬರುವುದಿಲ್ಲ. ಇಂದು ರಾಹುಲ್ ಗಾಂಧಿ ಪ್ರಕರಣ ಕೋರ್ಟ್‌ಗೆ ಬರಲಿದೆ. ಸದಸ್ಯತ್ವ ಕಳೆದುಕೊಳ್ಳುವ ಭೀತಿಯಿಂದ ರಾಹುಲ್ ಹುಚ್ಚುತನ ಮಾಡುತ್ತಿದ್ದಾರೆ. ಕೋರ್ಟ್‌ಗೆ ಜನರನ್ನು ಕರೆದುಕೊಂಡು ಹೋಗುವುದು ಬೆದರಿಕೆಯಲ್ಲವೇ? ಇಂತಹ ರಾಹುಲ್ ಗಾಂಧಿಯನ್ನು ಸಂಸದ ಸ್ಥಾನದಿಂದ ವಜಾಗೊಳಿಸಬೇಕು” ಎಂದು ಆಗ್ರಹಿಸಿದರು.

ದೆಹಲಿ ಪ್ರತಿಭಟನೆ ವೇಳೆ ಸಿಎಂ ಡಿಕೆಶಿ ನೂಕಾಟ ತಳ್ಳಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯದ ಸಿಎಂ ಸಂವಿಧಾನದತ್ತವಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಸಂವಿಧಾನದ ವಿರೋಧಿಯಾಗಿ ಸುಪ್ರೀಂಕೋರ್ಟ್ ಮುಂದೆ ಗಲಾಟೆ ಮಾಡಿದ್ದಾರೆ. ಸಿಎಂ ಡಿಕೆಶಿ ಮೊದಲು ತಮ್ಮ ನಡವಳಿಕೆ ಸರಿಪಡಿಸಿಕೊಳ್ಳಲಿ” ಎಂದು ಹೇಳಿದರು.