ಚಿತ್ರದುರ್ಗದಲ್ಲಿ ವಿವಾಹಿತೆ ಅನುಮಾನಾಸ್ಪದ ಸಾವು: ಲವ್ ಜಿಹಾದ್ ಆರೋಪ, ತನಿಖೆಗೆ ಹಿಂದೂ ಸಂಘಟನೆಗಳ ಆಗ್ರಹ
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಹೊಸ ಯಳನಾಡು ಗ್ರಾಮದ ಮಹಿಳೆ ಆಶಾ (30) ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಇದು ಲವ್ ಜಿಹಾದ್ ಪ್ರಕರಣ ಎಂದು ಹಿಂದೂಪರ ಸಂಘಟನೆಗಳು ಆರೋಪಿಸಿ ತನಿಖೆಗೆ ಆಗ್ರಹಿಸಿವೆ.
ಮೃತ ಆಶಾ ಮೂರು ವರ್ಷದ ಹಿಂದೆ ಹಿರಿಯೂರು ಪಟ್ಟಣದ ಇಮ್ರಾನ್ (40) ಎಂಬಾತನನ್ನು ಪ್ರೇಮ ವಿವಾಹವಾಗಿದ್ದರು. ಮದುವೆಯ ನಂತರ ಹಣಕ್ಕಾಗಿ ಪತಿ ಕಿರುಕುಳ ನೀಡುತ್ತಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಕೆಲ ತಿಂಗಳ ಹಿಂದೆ 1 ಲಕ್ಷ ರೂಪಾಯಿ ಹಣವನ್ನೂ ನೀಡಿದ್ದೆವು ಎಂದು ಆಶಾ ತಂದೆ ನಾಗರಾಜ್ ತಿಳಿಸಿದ್ದಾರೆ.
ಇಂದು ಬೆಳಗ್ಗೆ ಆಶಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ನಂತರ ಆಕೆಯನ್ನು ಹಿರಿಯೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪತಿ ಪರಾರಿಯಾಗಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆಶಾಗೆ ಎರಡೂವರೆ ವರ್ಷದ ಮಗು ಇದೆ.
ಘಟನೆ ಸಂಬಂಧ ಆಶಾ ತಂದೆ ನಾಗರಾಜ್ ಅವರು ಹಿರಿಯೂರು ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇತ್ತ ಈ ಪ್ರಕರಣವನ್ನು ಲವ್ ಜಿಹಾದ್ ಎಂದು ಬಣ್ಣಿಸಿರುವ ಹಿಂದೂ ಜಾಗರಣ ವೇದಿಕೆ, ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷದ್ ಕಾರ್ಯಕರ್ತರು ಹಿರಿಯೂರು ಠಾಣೆಗೆ ಮನವಿ ಸಲ್ಲಿಸಿದ್ದಾರೆ. ಪ್ರೇಮದ ಬಲೆಗೆ ಬೀಳಿಸಿ ಮದುವೆಯಾಗಿ ಹಣಕ್ಕಾಗಿ ಕಿರುಕುಳ ನೀಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ, ಸೂಕ್ತ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ನಂತರ ಆಶಾ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಹಿರಿಯೂರು ಟೌನ್ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
- ಗದ್ದನಕೇರಿ ಕ್ರಾಸ್ನಲ್ಲಿ ರೈತರ ಧರಣಿ: ಹೆದ್ದಾರಿ ಬಂದ್, ಪ್ರಯಾಣಿಕರ ಪರದಾಟ
- 🚧 ಧಾರವಾಡದಲ್ಲಿ ಕಬ್ಬು ರೈತರ ಆಕ್ರೋಶ: ಯರಿಕೊಪ್ಪ ಬೈಪಾಸ್ನಲ್ಲಿ ರಸ್ತೆ ತಡೆ – ಸಂಚಾರ ಮಾರ್ಗ ಬದಲಾವಣೆ
- 6 ಶಾಸಕರ ರಾಜೀನಾಮೆ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್
- ಮೀಸಲಾತಿ ಹೆಚ್ಚಳ ರದ್ದಾಗಲು ಕಾಂಗ್ರೆಸ್ ಸರ್ಕಾರವೇ ಕಾರಣ: ಗೋವಿಂದ ಕಾರಜೋಳ ಆರೋಪ
- ಚಿತ್ರದುರ್ಗ ಬಳಿ ಹಿಟ್ ಅಂಡ್ ರನ್: ಮರಿ ಚಿರತೆ ಬಲಿ




















