SK Home Ad
Home ಸುದ್ದಿ ರಾಜ್ಯ ವಿಕಸಿತ ಭಾರತಕ್ಕೆ ಯುವ ನವೋದ್ಯಮಿಗಳ ಕೊಡುಗೆ: ಬೆಂಗಳೂರಿನಲ್ಲಿ ‘ಸೇವಾ ಫಸ್ಟ್’ ಚಾಲನೆ

ವಿಕಸಿತ ಭಾರತಕ್ಕೆ ಯುವ ನವೋದ್ಯಮಿಗಳ ಕೊಡುಗೆ: ಬೆಂಗಳೂರಿನಲ್ಲಿ ‘ಸೇವಾ ಫಸ್ಟ್’ ಚಾಲನೆ

0
61
ವಿಕಸಿತ ಭಾರತಕ್ಕೆ ಯುವ ನವೋದ್ಯಮಿಗಳ ಕೊಡುಗೆ: ಬೆಂಗಳೂರಿನಲ್ಲಿ ‘ಸೇವಾ ಫಸ್ಟ್’ ಚಾಲನೆ

ಬೆಂಗಳೂರು: ದೇಶದ ಯುವಶಕ್ತಿಯನ್ನು ಸ್ಥಳೀಯ ಹಾಗೂ ರಾಷ್ಟ್ರೀಯ ಸಮಸ್ಯೆಗಳಿಗೆ ನವೀನ ಪರಿಹಾರಗಳನ್ನು ಕಂಡುಹಿಡಿಯಲು ಬಳಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಶಿಕ್ಷಣ ಸಚಿವಾಲಯದ ‘ಸೇವಾ ಫಸ್ಟ್ ಇನ್ನೋವೇಷನ್ ಚಾಲೆಂಜ್’ (Seva First Innovation Challenge)ಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc)ಯಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು. ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಆನಂದ್ ರಾವ್ ಪಾಟೀಲ್, IISc ನಿರ್ದೇಶಕ ಪ್ರೊ. ಗೋವಿಂದನ್ ರಂಗರಾಜನ್, UGC ಕಾರ್ಯದರ್ಶಿ ಶ್ಯಾಮಾ ರಾಥ್ ಸೇರಿದಂತೆ ಅಧಿಕಾರಿಗಳು ಹಾಗೂ ಶಿಕ್ಷಣ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.

ಭಾರತವು ವಿಶ್ವದಲ್ಲೇ ಅತಿ ದೊಡ್ಡ ಯುವಜನಸಂಖ್ಯೆಯನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದ್ದು, 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣದಲ್ಲಿ ಯುವಶಕ್ತಿಯ ಪಾತ್ರ ನಿರ್ಣಾಯಕವಾಗಲಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು. ಯುವಜನರು ತಮ್ಮ ಸುತ್ತಮುತ್ತಲಿನ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಕಾರ್ಯಗತಗೊಳಿಸಬಹುದಾದ ಪರಿಹಾರಗಳನ್ನು ರೂಪಿಸುವುದು ಈ ಸವಾಲಿನ ಪ್ರಮುಖ ಉದ್ದೇಶವಾಗಿದೆ.

‘ಸೇವಾ ಸಂಕಲ್ಪ ಅಭಿಯಾನ’ದ ಭಾಗವಾಗಿ ಆಯೋಜಿಸಲಾಗುತ್ತಿರುವ ಈ ರಾಷ್ಟ್ರೀಯ ಉಪಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರ ‘ರಾಷ್ಟ್ರ ಪ್ರಥಮ’ ಚಿಂತನೆಯೊಂದಿಗೆ ಜೋಡಿಸಲಾಗಿದೆ ಎಂದು ಸಚಿವರು ಹೇಳಿದರು. ಶಾಲೆಗಳು, ಕೈಗಾರಿಕಾ ತರಬೇತಿ ಸಂಸ್ಥೆಗಳು (ITI), ಪಾಲಿಟೆಕ್ನಿಕ್‌ಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಹಾಗೂ ಯುವ ನವೋದ್ಯಮಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.

ಕರ್ನಾಟಕ ಸೇರಿದಂತೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ ಮತ್ತು ಪುದುಚೇರಿ ಸೇರಿದಂತೆ ಒಟ್ಟು ಐದು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರಸ್ತುತ ಹಂತದಲ್ಲಿ ಸವಾಲು ಒಳಗೊಂಡಿದೆ. IISc ಬೆಂಗಳೂರು ಈ ಕಾರ್ಯಕ್ರಮದ ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಉಪಕ್ರಮವನ್ನು ಶಿಕ್ಷಣ ಸಚಿವಾಲಯ, AICTE ಮತ್ತು UGC ಜಂಟಿಯಾಗಿ ಆಯೋಜಿಸುತ್ತಿವೆ.

ಸ್ವಚ್ಛ ಮತ್ತು ಸುಸ್ಥಿರ ಭಾರತ, ಸಮೃದ್ಧ ರೈತರು, ಸಮೃದ್ಧ ಭಾರತ, ಆರೋಗ್ಯಕರ ಮತ್ತು ಒಳಗೊಳ್ಳುವ ಭಾರತ, ಶಿಕ್ಷಣ ಮತ್ತು ಕೌಶಲ್ಯ ಹೊಂದಿದ ಭಾರತ ಹಾಗೂ ಸುರಕ್ಷಿತ ಭಾರತ ಸೇರಿದಂತೆ ಪ್ರಮುಖ ರಾಷ್ಟ್ರೀಯ ಆದ್ಯತೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ನವೀನ ಪರಿಹಾರಗಳನ್ನು ಕಂಡುಹಿಡಿಯುವತ್ತ ಚಾಲೆಂಜ್ ಗಮನಹರಿಸಲಿದೆ.

ಚಾಲೆಂಜ್‌ನಲ್ಲಿ ಕೇವಲ ಕಲ್ಪನೆ ಮಂಡಿಸುವುದಕ್ಕೆ ಸೀಮಿತವಾಗದೆ, ಆಯ್ಕೆಯಾಗುವ ಪರಿಹಾರಗಳನ್ನು ಪರೀಕ್ಷಿಸಿ, ಸುಧಾರಿಸಿ ಮತ್ತು ಅನುಷ್ಠಾನಕ್ಕೆ ಕೊಂಡೊಯ್ಯುವ ಉದ್ದೇಶವಿದೆ. ಯುವ ನವೋದ್ಯಮಿಗಳಿಗೆ ಮಾರ್ಗದರ್ಶನ, ತಾಂತ್ರಿಕ ಬೆಂಬಲ ಮತ್ತು ಮುಂದಿನ ಹಂತದ ಅಭಿವೃದ್ಧಿಗೆ ಅವಕಾಶ ಕಲ್ಪಿಸುವ ವ್ಯವಸ್ಥೆಯನ್ನೂ ರೂಪಿಸಲಾಗುತ್ತಿದೆ.

ಇದೇ ವೇಳೆ, ‘ಸೇವಾ ಫಸ್ಟ್ ಇನ್ನೋವೇಷನ್ ಚಾಲೆಂಜ್’ಗಾಗಿ ವಿಶೇಷ ಪೋರ್ಟಲ್‌ಗೂ ಚಾಲನೆ ನೀಡಲಾಗಿದೆ. ಕೇಂದ್ರ ಶಿಕ್ಷಣ ಸಚಿವಾಲಯದ ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 25ರಿಂದ ಅಕ್ಟೋಬರ್ 24, 2026ರವರೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಯುವಜನರು ತಮ್ಮ ಸುತ್ತಲಿನ ನೈಜ ಸಮಸ್ಯೆಗಳನ್ನು ಗುರುತಿಸಿ, ಸಮಾಜಕ್ಕೆ ಉಪಯುಕ್ತವಾಗುವ ಹೊಸ ಪರಿಹಾರಗಳನ್ನು ರೂಪಿಸಲು ಈ ವೇದಿಕೆ ಅವಕಾಶ ನೀಡಲಿದೆ.

ಈ ಮೂಲಕ ಶಿಕ್ಷಣ ಸಂಸ್ಥೆಗಳಲ್ಲಿನ ವಿದ್ಯಾರ್ಥಿಗಳಲ್ಲಿ ಸಮಸ್ಯೆ ಗುರುತಿಸುವಿಕೆ, ನಾವೀನ್ಯತೆ, ಸಂಶೋಧನೆ ಮತ್ತು ಉದ್ಯಮಶೀಲತೆಯ ಮನೋಭಾವ ಬೆಳೆಸುವ ಜೊತೆಗೆ, 2047ರ ವಿಕಸಿತ ಭಾರತ ಗುರಿಗೆ ಯುವಜನರ ಸೃಜನಶೀಲತೆಯನ್ನು ಬಳಸಿಕೊಳ್ಳುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.