ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ತಮ್ಮ ನಡುವೆ ವೈಮನಸ್ಸಿದೆ ಎಂಬ ವದಂತಿಗಳಿಗೆ ಸಚಿವ ಸತೀಶ್ ಜಾರಕಿಹೊಳಿ ತೆರೆ ಎಳೆದಿದ್ದಾರೆ. “ಸಿದ್ದರಾಮಯ್ಯ ಈಗಲೂ ನಮಗೆ ಆರ್ಮಿ ಕ್ಯಾಪ್ಟನ್ ಇದ್ದಂತೆ, ನಾನು ಅದರ ವೈಸ್ ಕ್ಯಾಪ್ಟನ್. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ನಡೆದ ಇಡಿ ದಾಳಿಯ ಬಳಿಕ ಶಾಸಕ ಯತೀಂದ್ರ ಭೇಟಿಯಾಗಿ ಸಾಂತ್ವನ ಹೇಳಿರುವುದಾಗಿ ತಿಳಿಸಿದ ಅವರು, ಅಹಿಂದ ಸಂಘಟನೆ ಇಂದಿಗೂ ಭದ್ರವಾಗಿದೆ ಎಂದಿದ್ದಾರೆ.
2028ರ ನಾಯಕತ್ವದ ಕುರಿತು ಮಾತನಾಡಿದ ಸಚಿವರು, “ಡಿ.ಕೆ. ಶಿವಕುಮಾರ್ ಅವರಿಂದಲೇ ಮುಂದೆಯೂ ಪಕ್ಷ ಅಧಿಕಾರಕ್ಕೆ ಬರಲಿ, ಅವರೇ ಮುಖ್ಯಮಂತ್ರಿಯಾಗಲಿ. ನನಗೆ ಇನ್ನೂ ವಯಸ್ಸಿದೆ, ಕಾಯಲು ಸಿದ್ಧನಿದ್ದೇನೆ. ಸೂಕ್ತ ಸಮಯ ಬಂದಾಗ ಅವಕಾಶ ಸಿಕ್ಕರೆ ನೋಡೋಣ” ಎಂದು ಹೇಳಿದರು.
ಇದೇ ವೇಳೆ ಇಡಿ (ED) ದಾಳಿಯ ಕುರಿತು ಪ್ರತಿಕ್ರಿಯಿಸಿ, “ಈ ದಾಳಿಯು ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ. ನೋಟಿಸ್ ಬಂದ ತಕ್ಷಣ ಸೂಕ್ತ ಉತ್ತರ ನೀಡುತ್ತೇನೆ. ಇಂತಹ ದಾಳಿಗಳಿಂದ ನಾನು ಮಾನಸಿಕವಾಗಿ ಕುಗ್ಗುವುದಿಲ್ಲ, ಇದನ್ನು ರಾಜಕೀಯವಾಗಿಯೇ ಎದುರಿಸುತ್ತೇನೆ” ಎಂದು ಎಚ್ಚರಿಸಿದರು.
ಹಾಗೇ ಸರ್ಕಾರದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸ್ಪಷ್ಟನೆ ನೀಡಿದ ಸಚಿವರು, “ಆರ್ಥಿಕ ಇಲಾಖೆಯು ಹೊಸ ಘೋಷಣೆಗಳಿಗೆ ಹಣ ಹೊಂದಿಸುವುದು ಕಷ್ಟ ಎಂದು ಹೇಳಿದೆಯೇ ಹೊರತು, ಸರ್ಕಾರ ದಿವಾಳಿಯಾಗಿದೆ ಎಂದಿಲ್ಲ. ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳಿಗೆ ಹಣವಿದ್ದು, ಅನುದಾನ ಬಳಕೆ ಮಾಡಿಕೊಂಡು ಆಡಳಿತ ನಡೆಸಲಾಗುವುದು” ಎಂದು ವಿವರಣೆ ನೀಡಿದರು.





















