SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಮದ್ಯದ ಮತ್ತಿನಲ್ಲಿ ಜಗಳ: ಸೀರೆಯಿಂದ ಕತ್ತು ಬಿಗಿದು ಪ್ರಿಯಕರನ ಕೊಲೆ!

ಮದ್ಯದ ಮತ್ತಿನಲ್ಲಿ ಜಗಳ: ಸೀರೆಯಿಂದ ಕತ್ತು ಬಿಗಿದು ಪ್ರಿಯಕರನ ಕೊಲೆ!

0
8

ದಾವಣಗೆರೆ: ಮದ್ಯದ ಮತ್ತಿನಲ್ಲಿ ನಡೆದ ಜಗಳ ವಿಕೋಪಕ್ಕೆ ತಿರುಗಿ, ಮಹಿಳೆಯೊಬ್ಬರು ತನ್ನೊಂದಿಗೆ ವಾಸಿಸುತ್ತಿದ್ದ ವ್ಯಕ್ತಿಯನ್ನೇ ಸೀರೆಯಿಂದ ಕತ್ತು ಬಿಗಿದು ಕೊಲೆ ಮಾಡಿರುವ ಘಟನೆ ದಾವಣಗೆರೆಯ ನಾಗಮ್ಮ ಕೇಶವಮೂರ್ತಿ ಬಡಾವಣೆಯಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ದಾವಣಗೆರೆ ಮೂಲದ ಮಂಜಪ್ಪ (40) ಎಂದು ಗುರುತಿಸಲಾಗಿದೆ. ಪತ್ನಿ ಹಾಗೂ ಮಕ್ಕಳಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಮಂಜಪ್ಪನಿಗೆ, ಪತಿಯಿಂದ ವಿಚ್ಛೇದನ ಪಡೆದಿದ್ದ ಶಬೀನಾ (38) ಪರಿಚಯವಾಗಿತ್ತು. ಬಳಿಕ ಪರಿಚಯ ಪ್ರೀತಿಗೆ ತಿರುಗಿದ್ದು, ಕಳೆದ ಆರು ವರ್ಷಗಳಿಂದ ಇಬ್ಬರೂ ನಾಗಮ್ಮ ಕೇಶವಮೂರ್ತಿ ಬಡಾವಣೆಯಲ್ಲಿನ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.

ಘಟನೆ ನಡೆದ ದಿನ ಇಬ್ಬರೂ ಮದ್ಯ ಸೇವಿಸಿದ್ದರು. ಈ ವೇಳೆ ಕೌಟುಂಬಿಕ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದೆ. ಜಗಳ ತೀವ್ರಗೊಂಡಾಗ ಶಬೀನಾ, ತಾನು ಉಟ್ಟಿದ್ದ ಸೀರೆಯಿಂದ ಮಂಜಪ್ಪನ ಕುತ್ತಿಗೆ ಬಿಗಿದಿದ್ದು, ಉಸಿರುಗಟ್ಟಿ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಷಯ ತಿಳಿದು ಹದಡಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಶಬೀನಾಳನ್ನು ಪೊಲೀಸರು ಬಂಧಿಸಿದ್ದು, ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.