SK Home Ad
Home ಸಿನಿ ಮಿಲ್ಸ್ ಇಂದಿರಾ ಕ್ಯಾಂಟೀನ್ ಆವರಣದಲ್ಲಿ ನಂದಿನಿ ಹಾಲಿನ ಮಳಿಗೆ: 79 ಕಡೆ ಬೂತ್ ಸ್ಥಾಪನೆಗೆ ಜಿಬಿಎ ಅಸ್ತು!

ಇಂದಿರಾ ಕ್ಯಾಂಟೀನ್ ಆವರಣದಲ್ಲಿ ನಂದಿನಿ ಹಾಲಿನ ಮಳಿಗೆ: 79 ಕಡೆ ಬೂತ್ ಸ್ಥಾಪನೆಗೆ ಜಿಬಿಎ ಅಸ್ತು!

0
25

ಬೆಂಗಳೂರು: ರಾಜಧಾನಿಯ ಇಂದಿರಾ ಕ್ಯಾಂಟೀನ್‌ಗಳ ಆವರಣದಲ್ಲಿ ಇನ್ನುಮುಂದೆ ನಂದಿನಿ ಹಾಲಿನ ಉತ್ಪನ್ನಗಳೂ ಲಭ್ಯವಾಗಲಿವೆ. ನಗರದಲ್ಲಿರುವ ಒಟ್ಟು 79 ಇಂದಿರಾ ಕ್ಯಾಂಟೀನ್‌ಗಳ ಆವರಣದಲ್ಲಿ ನಂದಿನಿ ಔಟ್‌ಲೆಟ್ ಸ್ಥಾಪಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಿರ್ಧರಿಸಿದ್ದು, ಪ್ರತಿ ಮಳಿಗೆಗೆ 100 ಚದರ ಅಡಿ ಜಾಗವನ್ನು ಬೆಂಗಳೂರು ಹಾಲು ಒಕ್ಕೂಟಕ್ಕೆ (ಬಮುಲ್) 5 ವರ್ಷಗಳ ಗುತ್ತಿಗೆ ಆಧಾರದ ಮೇಲೆ ನೀಡಲು ಸಮ್ಮತಿಸಿದೆ.

ಕ್ಯಾಂಟಿನ್‌ಗಳಲ್ಲಿ ಆಹಾರದ ಗುಣಮಟ್ಟ ಮತ್ತು ವೈವಿಧ್ಯತೆ ಕೊರತೆಯಿಂದಾಗಿ ಇತ್ತೀಚೆಗೆ ಗ್ರಾಹಕರ ಭೇಟಿ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕ್ಯಾಂಟೀನ್ ಆವರಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಈ ಯೋಜನೆಯನ್ನು ರೂಪಿಸಲಾಗಿದೆ. ಸ್ಥಳದ ವಿಸ್ತೀರ್ಣಕ್ಕೆ ಅನುಗುಣವಾಗಿ ಮಾಸಿಕ ಬಾಡಿಗೆ ನಿಗದಿಪಡಿಸಲಾಗುತ್ತಿದ್ದು, ಉದಾಹರಣೆಗೆ ಅಶೋಕನಗರದಲ್ಲಿ ತಿಂಗಳಿಗೆ ₹1,965 ಹಾಗೂ ಹಲಸೂರು ಗೇಟ್ ಪೊಲೀಸ್ ಠಾಣೆ ಬಳಿ ₹7,031 ಬಾಡಿಗೆ ನಿಗದಿಯಾಗಿದೆ.

ಪ್ರಾರಂಭದಲ್ಲಿ 15 ವರ್ಷಗಳ ಗುತ್ತಿಗೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತಾದರೂ, ಬಿಬಿಎಂಪಿ ಆಸ್ತಿ ನಿರ್ವಹಣಾ ನಿಯಮಗಳು-2024ರ ಅಡಿಯಲ್ಲಿ ನಗರಾಭಿವೃದ್ಧಿ ಇಲಾಖೆಯು ಗುತ್ತಿಗೆ ಅವಧಿಯನ್ನು 5 ವರ್ಷಗಳಿಗೆ ಪರಿಮಿತಿಗೊಳಿಸಿದೆ. ಇದಷ್ಟೇ ಅಲ್ಲದೆ, ಬಮುಲ್ ಮನವಿಯ ಮೇರೆಗೆ ನಗರದಾದ್ಯಂತ ಹೆಚ್ಚುವರಿಯಾಗಿ 114 ಖಾಲಿ ನಿವೇಶನಗಳನ್ನು ಸಹ ಗುರುತಿಸಲಾಗುತ್ತಿದೆ.

ನಂದಿನಿ ಮಳಿಗೆಗಳಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದ್ದರೂ, ಕ್ಯಾಂಟೀನ್ ಜಾಗ ಕೊರತೆಯಾಗಬಹುದು ಎಂಬ ಆತಂಕ ಸಾರ್ವಜನಿಕರಲ್ಲಿದೆ. ಆದರೆ, ಕ್ಯಾಂಟೀನ್‌ಗೆ ಬರುವ ಬಡ ಹಾಗೂ ಆರ್ಥಿಕ ಹಿಂದುಳಿದ ವರ್ಗದ ಜನರ ಊಟದ ವ್ಯವಸ್ಥೆಗೆ ಯಾವುದೇ ತೊಂದರೆಯಾಗದಂತೆ ಪರ್ಯಾಯ ಕ್ರಮ ಕೈಗೊಳ್ಳುವುದಾಗಿ ಜಿಬಿಎ ಭರವಸೆ ನೀಡಿದೆ.