ದಾವಣಗೆರೆ: ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ಹರಿಸುವುದನ್ನು ವಿರೋಧಿಸಿ ಹಾಗೂ ಭದ್ರಾ ಬಲದಂಡೆ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಗೆ ಟ್ರ್ಯಾಕ್ಟರ್‌ಗಳ ಸಮೇತ ಮುತ್ತಿಗೆ ಹಾಕಲು ಮುಂದಾಗಿದ್ದ ರೈತರನ್ನು ಪೊಲೀಸರು ನಗರದ ಹೊರವಲಯದಲ್ಲೇ ತಡೆದ ಘಟನೆ ಬುಧವಾರ ನಡೆಯಿತು.
ದಾವಣಗೆರೆ ನಗರದ ಶಿರಮಗೊಂಡನಹಳ್ಳಿ ಹಾಗೂ ಕಾರಿಗನೂರು ಕ್ರಾಸ್ ಬಳಿ ಪೊಲೀಸ್ ಸಿಬ್ಬಂದಿ ರೈತರನ್ನು ತಡೆದು, ಜಿಲ್ಲಾಧಿಕಾರಿ ಕಚೇರಿಯತ್ತ ತೆರಳದಂತೆ ನಿರ್ಬಂಧಿಸಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಮುತ್ತಿಗೆ ತಡೆಯಲು ಬಿಗಿ ಬಂದೋಬಸ್ತ್: ರೈತರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಘೋಷಿಸಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಮಂಗಳವಾರ ಆದೇಶ ಹೊರಡಿಸಿದ್ದರು.
ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿತ್ತು. ಕಚೇರಿಯ ಪ್ರವೇಶ ದ್ವಾರ, ಕಮನ್ವಾಲ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ರೈತರು ಒಳನುಗ್ಗದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು.
‘ಕೃಷಿಗೆ ನೀರು ಕೇಳುವುದು ನಮ್ಮ ಹಕ್ಕು’: ರೈತರನ್ನು ತಡೆದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು, “ಕೃಷಿಗೆ ನೀರು ಕೇಳುವುದು ರೈತರ ಹಕ್ಕು. ರೈತರ ಬೇಡಿಕೆಯಂತೆ ಭದ್ರಾ ಬಲದಂಡೆ ನಾಲೆಗೆ ನೀರು ಹರಿಸುವುದು ಸರ್ಕಾರದ ಕರ್ತವ್ಯ. ನೀರು ಕೇಳಿ ಹೋರಾಟಕ್ಕೆ ಇಳಿದಾಗ ಜಿಲ್ಲಾಡಳಿತ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ನಮ್ಮನ್ನು ಎಷ್ಟೇ ತಡೆದರೂ ಹೋರಾಟ ನಿಲ್ಲುವುದಿಲ್ಲ. ಭದ್ರಾ ನೀರು ಹರಿಸುವವರೆಗೆ ಹೋರಾಟ ಮುಂದುವರಿಯಲಿದೆ” ಎಂದು ಪೊಲೀಸರ ಕ್ರಮದ ವಿರುದ್ಧವೂ ರೈತರು ಕಿಡಿಕಾರಿದರು.
ನಿಷೇಧಾಜ್ಞೆ ಜಾರಿಯ ಅಗತ್ಯವಿತ್ತೇ?….
ರೈತರು ಮುತ್ತಿಗೆ ಹಾಕುತ್ತಾರೆ ಎಂಬ ಕಾರಣಕ್ಕೆ 144ರ ಸೆಕ್ಷನ್ ಜಾರಿ ಮಾಡಬೇಕಿತ್ತೇ? ಎಂಬ ಪ್ರಶ್ನೆ ಜಿಲ್ಲಾಧಿಕಾರಿ ಕಚೇರಿ ಬಳಿ ಸಾರ್ವಜನಿಕರಿಂದ ಕೇಳಿಬಂತು. ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಬೆಳೆ ಬೆಳೆಯಲು ನೀರು ಕೇಳುವುದು ಅವರ ಹಕ್ಕು. ನಿಯಮಾನುಸಾರ ನೀರು ಹರಿಸಲಾಗಿದ್ದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ರೈತರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಘೋಷಿಸಿದ ತಕ್ಷಣವೇ ಕಚೇರಿ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿರುವುದು ಎಷ್ಟರಮಟ್ಟಿಗೆ ಸಮಂಜಸ ಎಂಬ ಕುರಿತು ಸಾರ್ವಜನಿಕರು ಪರಸ್ಪರ ಚರ್ಚಿಸುತ್ತಿರುವುದು ಕಂಡುಬಂತು.
ಕಚೇರಿ ಬಳಿ ಸಾರ್ವಜನಿಕರಿಗೆ ತೊಂದರೆ: ರೈತರ ಮುತ್ತಿಗೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಪ್ರವೇಶ ದ್ವಾರದ ಬಳಿ ಬ್ಯಾರಿಕೇಡ್ ಅಳವಡಿಸಿದ್ದರಿಂದ ವಿವಿಧ ಅಹವಾಲುಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ಸಾರ್ವಜನಿಕರು ತೊಂದರೆ ಅನುಭವಿಸಿದರು. ಕಚೇರಿಗೆ ಪ್ರವೇಶಿಸಲು ಹಾಗೂ ಅಧಿಕಾರಿಗಳನ್ನು ಭೇಟಿಯಾಗಲು ಬಂದವರು ಕೆಲಕಾಲ ಕಾಯಬೇಕಾಯಿತು.
ನೀರು ಹಂಚಿಕೆ ವಿವಾದಕ್ಕೆ ಆಡಳಿತಾತ್ಮಕ ಪರಿಹಾರವೇ? ಅಥವಾ ಪ್ರತಿಭಟನೆ ತಡೆಯುವುದೇ ಪರಿಹಾರವೇ? ಎಂಬ ಪ್ರಶ್ನೆಯೂ ರೈತರ ವಲಯದಲ್ಲಿ ಕೇಳಿಬರುತ್ತಿದೆ.




















