SK Home Ad
Home ಸುದ್ದಿ ರಾಜ್ಯ ಚಿನ್ನದಂತೆ ಕಂಗೊಳಿಸುವ ಸಾಂಸ್ಕೃತಿಕ ನಗರಿ: ಮೈಸೂರು ದಸರೆಯಲ್ಲಿ ತಪ್ಪದೇ ಭೇಟಿ ನೀಡಬೇಕಾದ ಪ್ರಮುಖ ಮಹಲುಗಳು

ಚಿನ್ನದಂತೆ ಕಂಗೊಳಿಸುವ ಸಾಂಸ್ಕೃತಿಕ ನಗರಿ: ಮೈಸೂರು ದಸರೆಯಲ್ಲಿ ತಪ್ಪದೇ ಭೇಟಿ ನೀಡಬೇಕಾದ ಪ್ರಮುಖ ಮಹಲುಗಳು

0
25

ವಿಶ್ವವಿಖ್ಯಾತ ಮೈಸೂರು ದಸರಾ ಎಂದರೆ ಬರಿ ಜಂಬೂಸವಾರಿಯಷ್ಟೇ ಅಲ್ಲ, ದೀಪಾಲಂಕಾರದಿಂದ ಮದುವಣಗಿತ್ತಿಯಂತೆ ಕಂಗೊಳಿಸುವ ಸಾಂಸ್ಕೃತಿಕ ನಗರಿಯ ಸೊಬಗು. ದಸರೆಯ ವೈಭವವನ್ನು ಪೂರ್ಣ ಪ್ರಮಾಣದಲ್ಲಿ ಅನುಭವಿಸಬೇಕಾದರೆ ಇಲ್ಲಿನ ರಾಜಪರಂಪರೆಯ ಭವ್ಯ ಅರಮನೆಗಳನ್ನು ಕಣ್ಣುಂಬಿಕೊಳ್ಳಲೇಬೇಕು.

ಸಾಮಾನ್ಯವಾಗಿ ಪ್ರವಾಸಿಗರನ್ನು ಆಕರ್ಷಿಸುವುದು ಅಂಬಾ ವಿಲಾಸ, ಲಲಿತಮಹಲ್ ಹಾಗೂ ಜಗನ್ಮೋಹನ ಅರಮನೆಗಳು. ಇಂಡೋ-ಸಾರ್ಸನಿಕ್ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಮುಖ್ಯ ಅಂಬಾ ವಿಲಾಸ ಅರಮನೆಯು ಅತ್ಯಂತ ವೈಭವೋಪೇತವಾಗಿದೆ. 1897ರಲ್ಲಿ ನಿರ್ಮಾಣ ಆರಂಭವಾಗಿ 1912ರಲ್ಲಿ ಪೂರ್ಣಗೊಂಡ ಈ ಅರಮನೆಯು ದರ್ಬಾರ್ ಹಾಲ್, ಕಲ್ಯಾಣ ಮಂಟಪ, ಬೊಂಬೆ ತೊಟ್ಟಿಲು ಹಾಗೂ ಅಪರೂಪದ ಕಲಾಕೃತಿಗಳನ್ನು ಹೊಂದಿದೆ.

ಜಯಮಾರ್ತಾಂಡ, ಜಯರಾಮ, ಬಲರಾಮ ಮತ್ತು ವರಾಹ ಎಂಬ ನಾಲ್ಕು ಪ್ರವೇಶದ್ವಾರಗಳನ್ನು ಹೊಂದಿರುವ ಈ ವಿಶಾಲ ಅರಮನೆಯು ದಸರಾ ಸಂದರ್ಭದಲ್ಲಿ ಸುಮಾರು 97,000 ವಿದ್ಯುತ್ ದೀಪಗಳ ಬೆಳಕಿನಲ್ಲಿ ಚಿನ್ನದಂತೆ ಕಂಗೊಳಿಸುತ್ತದೆ. ದಸರೆಗೆ ಆಗಮಿಸುವ ಪ್ರವಾಸಿಗರು ಈ ಐತಿಹಾಸಿಕ ಮಹಲುಗಳಿಗೆ ಭೇಟಿ ನೀಡದಿದ್ದರೆ ಅವರ ಪ್ರವಾಸ ಅಪೂರ್ಣ.