ಬೆಂಗಳೂರು: ರಾಜ್ಯದ ಹವಾಮಾನದಲ್ಲಿ ದಿಢೀರ್ ಬದಲಾವಣೆಯಾಗಿದ್ದು, ಮುಂಗಾರು ದುರ್ಬಲಗೊಂಡಿದ್ದರೂ ವಾಯುಭಾರ ಕುಸಿತದ ಪ್ರಭಾವದಿಂದಾಗಿ ದಕ್ಷಿಣ ಒಳನಾಡಿನಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಬರೋಬ್ಬರಿ 17 ಜಿಲ್ಲೆಗಳಿಗೆ ಇಂದು ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.
ಯಾವ್ಯಾವ ಜಿಲ್ಲೆಗಳಲ್ಲಿ ಮಳೆಯ ಅಬ್ಬರ?
ಹವಾಮಾನ ವರದಿ ಪ್ರಕಾರ, ದಕ್ಷಿಣ ಒಳನಾಡು ಕರ್ನಾಟಕದಿಂದ ತಮಿಳುನಾಡು ಮೂಲಕ ನೈರುತ್ಯ ಬಂಗಾಳ ಕೊಲ್ಲಿಯವರೆಗೆ ಹವಾಮಾನದಲ್ಲಿ ತೀವ್ರ ಬದಲಾವಣೆಯಾಗಿದೆ. ಇದರ ನೇರ ಪ್ರಭಾವ ದಕ್ಷಿಣ ಒಳನಾಡಿನ ಮೇಲಾಗಲಿದ್ದು, ಮುಂದಿನ 3 ದಿನಗಳ ಕಾಲ ಮಳೆಯಾಗಲಿದೆ.
ವಿಶೇಷವಾಗಿ ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಭಾರಿ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಉಳಿದಂತೆ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ.
ಬೆಂಗಳೂರು ಹಾಗೂ ಕರಾವಳಿಯ ಹವಾಮಾನ: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಜೊತೆಗೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಗರಿಷ್ಠ ತಾಪಮಾನ 32°C ಹಾಗೂ ಕನಿಷ್ಠ 21°C ಇರಲಿದೆ. ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗಲಿದ್ದು ಮೀನುಗಾರರಿಗೆ ಯಾವುದೇ ಎಚ್ಚರಿಕೆ ನೀಡಿಲ್ಲ. ಇತ್ತ ಉತ್ತರ ಒಳನಾಡಿನಲ್ಲಿ ಮಳೆಯ ಪ್ರಭಾವ ಕ್ಷೀಣಿಸಿದ್ದು, ಬಹುತೇಕ ಒಣಹವೆ ಮುಂದುವರಿಯಲಿದೆ.




















