ದಾವಣಗೆರೆ: ಶಾಲೆಯಲ್ಲಿ ಶೌಚಾಲಯವಿಲ್ಲದೆ ಹೆಣ್ಣುಮಕ್ಕಳು ಎದುರಿಸುತ್ತಿರುವ ತೊಂದರೆ ಕುರಿತು ಮಕ್ಕಳು ಸಲ್ಲಿಸಿದ ಮನವಿಗೆ ಸಚಿವ ಕೆ.ಎಸ್. ಬಸವಂತಪ್ಪ ಅವರು ಕೇವಲ 24 ಗಂಟೆಯೊಳಗೆ ಸ್ಪಂದಿಸಿದ್ದು, ಸೋಮವಾರ ಶೌಚಾಲಯ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವ ಮೂಲಕ ಭರವಸೆ ಈಡೇರಿಸಿದ್ದಾರೆ.
ತಾಲೂಕಿನ ಕುರ್ಕಿ ಗ್ರಾಮದಲ್ಲಿ ಭಾನುವಾರ ರಾತ್ರಿ ಗ್ರಾಮಸ್ಥರು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ಕೆ.ಎಸ್.ಬಸವಂತಪ್ಪ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಸಚಿವರನ್ನು ಭೇಟಿಯಾಗಿ, “ನಮ್ಮ ಸರ್ಕಾರಿ ಪ್ರೌಢಶಾಲೆಯಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ. ವಿಶೇಷವಾಗಿ ಹೆಣ್ಣುಮಕ್ಕಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ. ಶಾಲೆಗೆ ಶೌಚಾಲಯ ನಿರ್ಮಿಸಿಕೊಡಬೇಕು” ಎಂದು ಮನವಿ ಸಲ್ಲಿಸಿದರು.
ಮಕ್ಕಳ ಮನವಿಯನ್ನು ಆಲಿಸಿದ ಸಚಿವರು, ಸಮಸ್ಯೆಯ ಗಂಭೀರತೆಯನ್ನು ಅರಿತು ಕೂಡಲೇ ಶೌಚಾಲಯ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಶೀಘ್ರದಲ್ಲೇ ಕಾಮಗಾರಿ ಆರಂಭಿಸುವುದಾಗಿ ಮಕ್ಕಳಿಗೆ ಭರವಸೆ ನೀಡಿದರು.
ಭರವಸೆ ನೀಡಿದಂತೆ ಸೋಮವಾರ ಕಾರವಾರ ಜಿಲ್ಲಾ ಪ್ರವಾಸಕ್ಕೆ ತೆರಳುವ ಮುನ್ನ ಕುರ್ಕಿ ಗ್ರಾಮಕ್ಕೆ ಆಗಮಿಸಿದ ಸಚಿವರು, ಶಾಲಾ ಆವರಣದಲ್ಲಿ ಶೌಚಾಲಯ ನಿರ್ಮಾಣಕ್ಕೆ ಮಕ್ಕಳ ಕೈಯಿಂದಲೇ ಭೂಮಿಪೂಜೆ ನೆರವೇರಿಸಿದರು. ಈ ಮೂಲಕ ಮಕ್ಕಳ ಮನವಿಗೆ ತ್ವರಿತವಾಗಿ ಸ್ಪಂದಿಸುವ ಮೂಲಕ ಗಮನ ಸೆಳೆದರು. ಈ ಸಂದರ್ಭದಲ್ಲಿ ಮನವಿ ಸಲ್ಲಿಸಿದ ಮಕ್ಕಳು ಭರವಸೆ ಈಡೇರಿಸಿದ್ದಕ್ಕಾಗಿ ಸಚಿವ ಕೆ.ಎಸ್.ಬಸವಂತಪ್ಪ ಅವರಿಗೆ ಸಿಹಿ ತಿನಿಸಿ ಧನ್ಯವಾದ ಅರ್ಪಿಸಿದರು.
ಮಕ್ಕಳ ಮನವಿಗೆ ಆದ್ಯತೆ: ಸಾಮಾನ್ಯವಾಗಿ ಸಾರ್ವಜನಿಕ ಸಮಸ್ಯೆಗಳ ಕುರಿತು ಸಲ್ಲಿಕೆಯಾಗುವ ಮನವಿಗಳಿಗೆ ಪರಿಹಾರ ದೊರೆಯಲು ಹಲವು ದಿನಗಳು ಅಥವಾ ತಿಂಗಳುಗಳು ಬೇಕಾಗುವ ಸಂದರ್ಭಗಳಿವೆ. ಆದರೆ, ಶಾಲಾ ಮಕ್ಕಳ ಮೂಲಭೂತ ಅಗತ್ಯಕ್ಕೆ ಸಂಬಂಧಿಸಿದ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಮರುದಿನವೇ ಸ್ಥಳಕ್ಕೆ ಆಗಮಿಸಿ ಕಾಮಗಾರಿಗೆ ಚಾಲನೆ ನೀಡಿರುವುದು ವಿಶೇಷವಾಗಿದೆ.
ಶಾಲೆಯಲ್ಲಿ ಶೌಚಾಲಯದ ಕೊರತೆಯಿಂದ ಹೆಣ್ಣುಮಕ್ಕಳು ಎದುರಿಸುತ್ತಿದ್ದ ಮುಜುಗರ ಮತ್ತು ತೊಂದರೆಗೆ ಇದರಿಂದ ಪರಿಹಾರ ದೊರೆಯುವ ನಿರೀಕ್ಷೆ ಮೂಡಿದೆ.
“ಜನರ ಸಮಸ್ಯೆಗಳನ್ನು ಆಲಿಸಿ, ಸಾಧ್ಯವಾದಷ್ಟು ತ್ವರಿತವಾಗಿ ಪರಿಹರಿಸುವುದು ಜನಪ್ರತಿನಿಧಿಯ ಜವಾಬ್ದಾರಿ. ಮಕ್ಕಳ ಮನವಿಗೆ ಸ್ಪಂದಿಸಿ 24 ಗಂಟೆಯೊಳಗೆ ಕಾಮಗಾರಿಗೆ ಚಾಲನೆ ನೀಡಿರುವುದು ಸಾಮಾಜಿಕ ಕಾಳಜಿಗೆ ಉದಾಹರಣೆ” ಎಂದು ಗ್ರಾಮಸ್ಥರು ಸಚಿವ ಬಸವಂತಪ್ಪ ಅವರ ಕಾರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಎಇಇ ಅಶೋಕ, ಕುರ್ಕಿ ಗ್ರಾಮದ ರೇವಣಸಿದ್ಧಪ್ಪ, ನಿಂಗಪ್ಪ, ನಂದಿಶ್, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಮಕ್ಕಳು, ಗ್ರಾಮಸ್ಥರು ಉಪಸ್ಥಿತರಿದ್ದರು.




















