SK Home Ad
Home ಸುದ್ದಿ ರಾಜ್ಯ ಮುಂಗಾರು ಮಳೆ ದುರ್ಬಲ: ಇನ್ನು ಸೈಕ್ಲೋನ್ ಬಂದರಷ್ಟೇ ಮಳೆ

ಮುಂಗಾರು ಮಳೆ ದುರ್ಬಲ: ಇನ್ನು ಸೈಕ್ಲೋನ್ ಬಂದರಷ್ಟೇ ಮಳೆ

0
45

ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆ ದುರ್ಬಲವಾಗಿದ್ದು, ಬೇಸಿಗೆಯ ವಾತಾವರಣ ಸೃಷ್ಟಿಯಾಗಿದ್ದು, ಕೆಲವೆಡೆ ತುಂತುರು ಮಳೆಯಾಗುತ್ತಿರುವುದನ್ನು ಬಿಟ್ಟರೆ ದೊಡ್ಡ ಪ್ರಮಾಣದ ಮಳೆಯ ವಾತಾವರಣ ಕಾಣುತ್ತಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಾತಾವರಣ ಗಮನಿಸಿದರೆ ಮಳೆ ಮುನ್ಸೂಚನೆಗಳಿಲ್ಲ. ಆದರೆ, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗುವ ಲಕ್ಷಣಗಳು ಗೋಚರಿಸಿವೆ. ಇದು ಕೂಡಾ ಕರ್ನಾಟಕದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬುದು ಇನ್ನು ಗೊತ್ತಾಗಿಲ್ಲ. ಒಂದು ವೇಳೆ ಇದು ದಕ್ಷಿಣ ಭಾರತದ ಕಡೆ ಚಂಡಮಾರುತವಾಗಿ ಸೃಷ್ಟಿಯಾದಲ್ಲಿ ಕರ್ನಾಟಕದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ

ಹಗುರದ ಮಳೆ: ಕಳೆದ 24 ಗಂಟೆ ಅವಧಿಯಲ್ಲಿ ರಾಜ್ಯದಲ್ಲಿ ಮುಂಗಾರು ದುರ್ಬಲವಾಗಿದ್ದು, ಒಂದೆರಡು ಕಡೆಗಳಲ್ಲಿ ಮಾತ್ರ ಮಳೆಯಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ 2 ಸೆಂ.ಮೀ ಮಳೆಯಾಗಿದೆ. ಹಲವು ಜಿಲ್ಲೆಗಳಲ್ಲಿ ಒಣಹವೆಯ ವಾತಾವರಣ ಮುಂದುವರಿದಿದೆ. ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ, ಉತ್ತರ ಒಳನಾಡಿನ ಬೀದರ್, ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಹಗುರ ಮಳೆಯ ಮುನ್ಸೂಚನೆ ನೀಡಲಾಗಿದೆ. ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲೂ ಅಲ್ಲಲ್ಲಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಈ ನಡುವೆ, ವಾಯವ್ಯ-ಪಶ್ಚಿಮ ಮಧ್ಯ ಬಂಗಾಳಕೊಲ್ಲಿ ಹಾಗೂ ಅದಕ್ಕೆ ಹೊಂದಿಕೊಂಡಿರುವ ದಕ್ಷಿಣ ಒಡಿಶಾ, ಉತ್ತರಪ್ರದೇಶ, ಆಂಧ್ರಪ್ರದೇಶ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ.

ಇದಕ್ಕೆ ಸಂಬಂಧಿಸಿದ ಚಂಡಮಾರುತದ ಪರಿಚಲನೆಯು ಸಮುದ್ರಮಟ್ಟದಿಂದ ಸುಮಾರು 7.6 ಕಿಲೋಮೀಟರ್ ಎತ್ತರದವರೆಗೆ ವಿಸ್ತರಿಸಿದೆ. ಇದು ನೈಋತ್ಯ ದಿಕ್ಕಿನತ್ತ ಚಲಿಸಲಿದ್ದು, ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ಸ್ಪಷ್ಟವಾಗಿ, ಉತ್ತರ ಕರಾವಳಿ ಆಂಧ್ರಪ್ರದೇಶ ದಕ್ಷಿಣ ಒಡಿಶಾ ಭಾಗದ ಮೂಲಕ ಪಶ್ಚಿಮ-ವಾಯವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಕರ್ನಾಟಕದ ಕೆಲವು ಭಾಗಗಳಲ್ಲಿನ ಮಳೆ ಪ್ರಮಾಣದಲ್ಲಿ ಬದಲಾವಣೆ ಕಂಡುಬರುವ ಸಾಧ್ಯತೆ ಇದೆ. ಕೆಲವು ಜಿಲ್ಲೆಗಳಲ್ಲಿ ಭಾರಿ ಇಲ್ಲವೇ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶೇ. 50ರಷ್ಟು ಮಳೆ ಕೊರತೆ: ರಾಜ್ಯದಲ್ಲಿ ಕಳೆದ 15 ದಿನಗಳಿಂದ ಮಳೆ ತೀರಾ ದುರ್ಬಲವಾಗಿದೆ. ಕರಾವಳಿ ಭಾಗದ ಒಂದೆರಡು ಕಡೆ ಮಳೆ ಬಿದ್ದಿರುವುದು ಬಿಟ್ಟರೆ ಒಳನಾಡಿನ ಸೀಮಿತ ಪ್ರದೇಶದಲ್ಲಿ ಸಾಧಾರಣ ಮಳೆಯಾಗಿದೆ. ಒಟ್ಟಾರೆ ರಾಜ್ಯದಲ್ಲಿ ಶೇ. 50ರಷ್ಟು ಮಳೆ ಕೊರತೆ ಎದುರಾಗಿದೆ.