ಬೆಂಗಳೂರು: ಭಾರತ ರತ್ನ ಪುರಸ್ಕೃತ ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಅವರ ಮತದಾರರ ದಾಖಲೆಯಲ್ಲಿ ಹೆಸರು ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ ಎಂಬ ವರದಿ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಪ್ರೊ. ರಾವ್ ಅವರಿಗೆ ಯಾವುದೇ ನೋಟಿಸ್ ನೀಡಲಾಗಿಲ್ಲ ಎಂದು ಚುನಾವಣಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿನ ವರದಿ ವಾಸ್ತವಾಂಶಕ್ಕೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಕರಡು ಮತದಾರರ ಪಟ್ಟಿಯ ಪ್ರಕಾರ ಪ್ರೊ. ಸಿ.ಎನ್.ಆರ್. ರಾವ್ ಅವರು ಬೆಂಗಳೂರು ನಗರದ 157-ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 59ರಲ್ಲಿ ಮತದಾರರಾಗಿದ್ದಾರೆ. ಆದರೆ, ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅವರ ಪ್ರಸ್ತುತ ದಾಖಲೆ ಮತ್ತು 2002ರ ಮತದಾರರ ಪಟ್ಟಿಯಲ್ಲಿರುವ ವಿವರಗಳ ನಡುವೆ ಹೊಂದಾಣಿಕೆ ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಪ್ರಸ್ತುತ ಕರಡು ಪಟ್ಟಿಯಲ್ಲಿ ಅವರ ಹೆಸರು “ಪ್ರೊ. ಸಿ.ಎನ್.ಆರ್. ರಾವ್ ಎಸ್/ಒ. ನಾಗೇಶ್ ರಾವ್. ಹೆಚ್” ಎಂದು ದಾಖಲಾಗಿದ್ದರೆ, 2002ರ ಮತದಾರರ ಪಟ್ಟಿಯಲ್ಲಿ “ರಾಮ ಎಸ್/ಒ. ಹೆಚ್. ನಾಗೇಶ್” ಎಂಬ ಹೆಸರು ದಾಖಲಾಗಿದೆ. ಇದೇ ವ್ಯತ್ಯಾಸದ ಹಿನ್ನೆಲೆಯಲ್ಲಿ SIR ಪ್ರಕ್ರಿಯೆಯಲ್ಲಿ ದಾಖಲೆ ಪರಿಶೀಲನೆ ಅಗತ್ಯವಾಗಿತ್ತು.
ಈ ಹಿನ್ನೆಲೆಯಲ್ಲಿ, SIR ಎಣಿಕೆ ಫಾರ್ಮ್ ಅನ್ನು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ, ಬೆಂಗಳೂರು ಪಶ್ಚಿಮ ನಗರ ನಿಗಮದ ಆಯುಕ್ತರು, ಮಲ್ಲೇಶ್ವರಂ ERO ಹಾಗೂ ಭಾಗ ಸಂಖ್ಯೆ 59ರ BLO ಅವರು ಪ್ರೊ. ಸಿ.ಎನ್.ಆರ್. ರಾವ್ ಅವರ ನಿವಾಸಕ್ಕೆ ತೆರಳಿ ಗೌರವಪೂರ್ವಕವಾಗಿ ಹಸ್ತಾಂತರಿಸಿದ್ದರು ಎಂದು ಅಧಿಕಾರಿಗಳ ಸ್ಪಷ್ಟೀಕರಣದಲ್ಲಿ ತಿಳಿಸಲಾಗಿದೆ.
ಪ್ರೊ. ಸಿ.ಎನ್.ಆರ್. ರಾವ್ ಅವರ ಸ್ಥಾನಮಾನ ಮತ್ತು ಅವರ ವೈಜ್ಞಾನಿಕ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಅಥವಾ ಅವರ ಕುಟುಂಬ ಸದಸ್ಯರಿಗೆ ಯಾವುದೇ ನೋಟಿಸ್ ನೀಡಲಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಬೂತ್ ಮಟ್ಟದ ಅಧಿಕಾರಿ (BLO) ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅಂತಿಮ ಅನುಮೋದನೆಗಾಗಿ ಸಂಬಂಧಪಟ್ಟ ಹೆಚ್ಚುವರಿ ಚುನಾವಣಾ ನೋಂದಣಿ ಅಧಿಕಾರಿ (AERO) ಅವರಿಗೆ ಶಿಫಾರಸು ಮಾಡಿದ್ದರು.
ಸೆಪ್ಟೆಂಬರ್ 8ರಂದು AERO ದಾಖಲೆಗಳನ್ನು ಪರಿಶೀಲಿಸಿ, ಅಂತಿಮ ಮತದಾರರ ಪಟ್ಟಿಯಲ್ಲಿ ಪ್ರೊ. ಸಿ.ಎನ್.ಆರ್. ರಾವ್ ಅವರ ಹೆಸರನ್ನು ಸೇರ್ಪಡೆಗೊಳಿಸಲು ಅನುಮೋದನೆ ನೀಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಹೆಸರು ಹೊಂದಾಣಿಕೆಯಾಗದ ಕಾರಣ ಪ್ರೊ. ರಾವ್ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯಲಾಗಿದೆ ಎಂಬ ವರದಿಯ ಬಗ್ಗೆ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ ಕೆಲವು ಮಾಧ್ಯಮ ವರದಿಗಳಲ್ಲಿ SIR ಪ್ರಕ್ರಿಯೆಯ ವೇಳೆ ಪ್ರೊ. ಸಿ.ಎನ್.ಆರ್. ರಾವ್ ಅವರ ಹೆಸರಿನಲ್ಲಿ ವ್ಯತ್ಯಾಸ ಕಂಡುಬಂದಿದ್ದು, “self-name mismatch” ಆಧಾರದ ಮೇಲೆ ಅವರನ್ನು ಮಲ್ಲೇಶ್ವರಂನಲ್ಲಿ ನಡೆಯುವ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ವರದಿಯಾಗಿತ್ತು. ಕೆಲವು ವರದಿಗಳು ಹಳೆಯ ಮತ್ತು ಪ್ರಸ್ತುತ ದಾಖಲೆಗಳಲ್ಲಿನ ಹೆಸರಿನ ವ್ಯತ್ಯಾಸವನ್ನು “Prof” ಮತ್ತು “Proff” ಎಂಬ ಹೆಚ್ಚುವರಿ ‘f’ ಅಕ್ಷರದ ತಪ್ಪಾಗಿ ವಿವರಿಸಿದ್ದವು.
ಆದರೆ, ನಂತರದ ಚುನಾವಣಾ ಅಧಿಕಾರಿಗಳ ಸ್ಪಷ್ಟೀಕರಣವು ಈ ವರದಿಗೆ ಭಿನ್ನವಾದ ಚಿತ್ರಣ ನೀಡಿದೆ. Greater Bengaluru Authority (GBA) ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಕೂಡ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ಹೆಸರು ವ್ಯತ್ಯಾಸದ ಹಿನ್ನೆಲೆಯಲ್ಲಿ ಯಾವುದೇ ನೋಟಿಸ್ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬೆಳವಣಿಗೆಯ ನಡುವೆ, ಪ್ರೊ. ರಾವ್ ಅವರ ದಾಖಲೆಗಳನ್ನು ಅಂತಿಮ ಪಟ್ಟಿಗೆ ಸೇರಿಸಲು ಈಗಾಗಲೇ ಸೆಪ್ಟೆಂಬರ್ 8ರಂದು ಅನುಮೋದನೆ ದೊರೆತಿರುವುದರಿಂದ, ಅವರ ಮತದಾರರ ಸ್ಥಾನಮಾನಕ್ಕೆ ಸಂಬಂಧಿಸಿದ ಪ್ರಕ್ರಿಯೆ ಪೂರ್ಣಗೊಂಡಿದೆ ಎಂಬುದು ಅಧಿಕಾರಿಗಳ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ.
ಭಾರತ ರತ್ನ ಪುರಸ್ಕೃತ ಪ್ರೊ. ಸಿ.ಎನ್.ಆರ್. ರಾವ್ ಅವರು ಭಾರತದ ಅತ್ಯಂತ ಹಿರಿಯ ಹಾಗೂ ಗೌರವಾನ್ವಿತ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದಾರೆ. ಘನಸ್ಥಿತಿ ಮತ್ತು ವಸ್ತು ವಿಜ್ಞಾನ ಕ್ಷೇತ್ರದಲ್ಲಿ ಅವರ ಸಂಶೋಧನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿವೆ. 2014ರಲ್ಲಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ನೀಡಲಾಗಿತ್ತು.
ಹೀಗಾಗಿ, “CNR ರಾವ್ ಅವರಿಗೆ ಹೆಸರು ಹೊಂದಾಣಿಕೆಯಾಗದ ಕಾರಣ ನೋಟಿಸ್ ನೀಡಲಾಗಿದೆ” ಎಂಬ ಆರಂಭಿಕ ವರದಿಗಿಂತ, “ನೋಟಿಸ್ ನೀಡಿಲ್ಲ; ಪರಿಶೀಲನೆಯ ಬಳಿಕ ದಾಖಲೆ ಅಂತಿಮ ಪಟ್ಟಿಗೆ ಸೇರ್ಪಡೆಗೆ ಅನುಮೋದಿಸಲಾಗಿದೆ” ಎಂಬ ಅಧಿಕಾರಿಗಳ ಇತ್ತೀಚಿನ ಸ್ಪಷ್ಟೀಕರಣವೇ ಪ್ರಸ್ತುತ ಲಭ್ಯವಿರುವ ಹೊಸ ಬೆಳವಣಿಗೆಯಾಗಿದೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.





















