SK Home Ad
Home ಸುದ್ದಿ ರಾಜ್ಯ ಬಿಜೆಪಿ ಪಾದಯಾತ್ರೆ: ಬಳ್ಳಾರಿ ಪ್ರವೇಶದೊಂದಿಗೆ ಕಾವೇರಿದ ‘ಬಳ್ಳಾರಿ ಚಲೋ’

ಬಿಜೆಪಿ ಪಾದಯಾತ್ರೆ: ಬಳ್ಳಾರಿ ಪ್ರವೇಶದೊಂದಿಗೆ ಕಾವೇರಿದ ‘ಬಳ್ಳಾರಿ ಚಲೋ’

0
61

ಬಳ್ಳಾರಿ: ರಾಜ್ಯದ ಕಾನೂನು–ಸುವ್ಯವಸ್ಥೆ, ರೈತರ ಸಮಸ್ಯೆ, ಯುವಕರ ಉದ್ಯೋಗ ಹಾಗೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ಸೋಮವಾರ ಏಳನೇ ದಿನ ಪೂರೈಸಿತು. ಕಂಪ್ಲಿಯಿಂದ ಬಳ್ಳಾರಿ ಜಿಲ್ಲೆಯತ್ತ ಯಾತ್ರೆ ಸಾಗುತ್ತಿದ್ದಂತೆ ರಾಜಕೀಯ ಕಾವು ಮತ್ತಷ್ಟು ಹೆಚ್ಚಿತು.

ಕಂಪ್ಲಿಯ ಅಂಬೇಡ್ಕರ್ ವೃತ್ತದಿಂದ ಬೆಳಿಗ್ಗೆ 10.30ಕ್ಕೆ ಆರಂಭವಾದ ಯಾತ್ರೆಯಲ್ಲಿ ವಿಜಯೇಂದ್ರ, ಮಾಜಿ ಸಚಿವರಾದ ಬಿ. ಶ್ರೀರಾಮುಲು, ಸಿ.ಟಿ. ರವಿ, ಸಂಸದ ತೇಜಸ್ವಿಸೂರ್ಯ, ಪ್ರತಾಪ್ ಸಿಂಹ, ಶಾಸಕರು ಹಾಗೂ ಹಲವು ಮುಖಂಡರು ಪಾಲ್ಗೊಂಡರು. ಸಾವಿರಾರು ಕಾರ್ಯಕರ್ತರು ಹಾಗೂ ಬೆಂಬಲಿಗರು ಸಾಥ್ ನೀಡಿದರು.

ಮೆಟ್ರಿ ತಲುಪಿದ ಬಳಿಕ ಕೆಲಕಾಲ ವಿರಾಮ ಪಡೆದ ವಿಜಯೇಂದ್ರ, ಜೆನ್‌-ಜಿ ಯುವಕರೊಂದಿಗೆ ಸಂವಾದ ನಡೆಸಿ ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿ, ಎಐ ಹಾಗೂ ತಂತ್ರಜ್ಞಾನ ಬಳಕೆ ಕುರಿತು ಚರ್ಚಿಸಿದರು. ಬಿಸಿಲಿನ ನಡುವೆಯೂ ಯಾತ್ರೆಯ ಉತ್ಸಾಹ ಕುಗ್ಗಲಿಲ್ಲ. ಮೆಟ್ರಿಯಿಂದ ದೇವಲಾಪುರ, ಕಣಿವೆಮಾರಮ್ಮ ದೇವಸ್ಥಾನ ಮಾರ್ಗವಾಗಿ ದರೋಜಿ ತಲುಪಿದ ಯಾತ್ರೆಗೆ ಗ್ರಾಮೀಣ ಭಾಗದಲ್ಲಿ ಜನರಿಂದ ಉತ್ತಮ ಸ್ವಾಗತ ದೊರೆಯಿತು.

ದರೋಜಿಯ ಬಹಿರಂಗ ಸಮಾವೇಶದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಾನೂನು–ಸುವ್ಯವಸ್ಥೆ, ರೈತರ ಸಮಸ್ಯೆ, ಬರ ಪರಿಹಾರ, ಯುವಕರ ಉದ್ಯೋಗ, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಹಾಗೂ ಆಡಳಿತ ವೈಫಲ್ಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಶ್ರೀರಾಮುಲು ಹಾಗೂ ಗಾಲಿ ಜನಾರ್ದನ ರೆಡ್ಡಿ ಸ್ಥಳೀಯ ಕಾಂಗ್ರೆಸ್ ನಾಯಕರ ವಿರುದ್ಧವೂ ಟೀಕಾಪ್ರಹಾರ ನಡೆಸಿದರು.

‘ಬಳ್ಳಾರಿ ಚಲೋ’ ಬಿಜೆಪಿ ಕಾರ್ಯಕರ್ತರ ಪಾದಯಾತ್ರೆಯಲ್ಲ, ಜನರ ಪಾದಯಾತ್ರೆ. ಇದು ಸರ್ಕಾರದ ವಿರುದ್ಧ ಜನರ ಕೋಪದ ಎಚ್ಚರಿಕೆಯ ಗಂಟೆ ಎಂದು ವಿಜಯೇಂದ್ರ ಹೇಳಿದರು. ರೈತರು ಮತ್ತು ಕಾರ್ಮಿಕರಿಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುವುದಾಗಿ ಘೋಷಿಸಿದರು.

ಬಳ್ಳಾರಿ ಜಿಲ್ಲೆ ಪ್ರವೇಶದೊಂದಿಗೆ ಪಾದಯಾತ್ರೆ ಮತ್ತಷ್ಟು ರಾಜಕೀಯ ಮಹತ್ವ ಪಡೆದುಕೊಂಡಿದ್ದು, ಸೆ. 10ರಂದು ಬಳ್ಳಾರಿಯಲ್ಲಿ ನಡೆಯಲಿರುವ ಬೃಹತ್ ಸಮಾರೋಪ ಸಮಾವೇಶದತ್ತ ಇದೀಗ ಎಲ್ಲರ ಗಮನ ನೆಟ್ಟಿದೆ.