SK Home Ad
Home ಸುದ್ದಿ ದೇಶ ಸತ್ಯ ನಿಕೇತನ ಕಟ್ಟಡ ಕುಸಿತ ಪ್ರಕರಣ : 7 ಮಂದಿ ಬಲಿ – 5 MCD...

ಸತ್ಯ ನಿಕೇತನ ಕಟ್ಟಡ ಕುಸಿತ ಪ್ರಕರಣ : 7 ಮಂದಿ ಬಲಿ – 5 MCD ಅಧಿಕಾರಿಗಳು ಅಮಾನತು

0
69
7 ಮಂದಿ ಬಲಿ, 12 ಮಂದಿ ರಕ್ಷಣೆ; ಸತ್ಯ ನಿಕೇತನ ದುರಂತದ ಬಳಿಕ 5 ಅಧಿಕಾರಿಗಳು ಅಮಾನತು

ನವದೆಹಲಿ: ದೆಹಲಿಯ ಸತ್ಯ ನಿಕೇತನ ಪ್ರದೇಶದಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿದು ಸಂಭವಿಸಿದ ಭೀಕರ ದುರಂತದ ಬೆನ್ನಲ್ಲೇ ದೆಹಲಿ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ದೆಹಲಿ ಮಹಾನಗರ ಪಾಲಿಕೆ (MCD) ದಕ್ಷಿಣ ವಲಯದ ಡೆಪ್ಯುಟಿ ಕಮಿಷನರ್ ಸೇರಿದಂತೆ ಐವರು ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.

ಅಮಾನತುಗೊಂಡವರಲ್ಲಿ ಡೆಪ್ಯುಟಿ ಕಮಿಷನರ್, ಎಕ್ಸಿಕ್ಯೂಟಿವ್ ಎಂಜಿನಿಯರ್, ಸೂಪರಿಂಟೆಂಡಿಂಗ್ ಎಂಜಿನಿಯರ್, ಅಸಿಸ್ಟೆಂಟ್ ಎಂಜಿನಿಯರ್ ಹಾಗೂ ಜೂನಿಯರ್ ಎಂಜಿನಿಯರ್ ಸೇರಿದ್ದಾರೆ. ಕಟ್ಟಡ ಕುಸಿತಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಹೊಣೆಗಾರಿಕೆ ಮತ್ತು ಮೇಲ್ವಿಚಾರಣೆಯ ಕುರಿತು ಪ್ರಶ್ನೆಗಳು ಎದುರಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಸಾವಿನ ಸಂಖ್ಯೆ 7ಕ್ಕೆ ಏರಿಕೆ : ಸತ್ಯ ನಿಕೇತನದಲ್ಲಿ ಕುಸಿದ ಕಟ್ಟಡವನ್ನು ವಿದ್ಯಾರ್ಥಿಗಳ ಪೇಯಿಂಗ್ ಗೆಸ್ಟ್‌ (PG) ವಸತಿ ವ್ಯವಸ್ಥೆಯಾಗಿ ಬಳಸಲಾಗುತ್ತಿತ್ತು. ಘಟನೆಯ ಬಳಿಕ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ದೆಹಲಿ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸೇರಿದಂತೆ ವಿವಿಧ ತಂಡಗಳು ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.

ಇತ್ತೀಚಿನ ಮಾಹಿತಿಯಂತೆ ಘಟನೆಯಲ್ಲಿ 7 ಮಂದಿ ಮೃತಪಟ್ಟಿದ್ದು, 12 ಮಂದಿಯನ್ನು ರಕ್ಷಿಸಲಾಗಿದೆ. ರಕ್ಷಿಸಲ್ಪಟ್ಟವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಏಮ್ಸ್‌ ಸಂಬಂಧಿತ ಮಾಹಿತಿ ತಿಳಿಸಿದೆ.

ಕಟ್ಟಡದ ಸುರಕ್ಷತೆ ಬಗ್ಗೆ ಪ್ರಶ್ನೆ : ಕಟ್ಟಡದಲ್ಲಿ ದುರಸ್ತಿ ಹಾಗೂ ಬೇಸ್‌ಮೆಂಟ್ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಕುಸಿತ ಸಂಭವಿಸಿದೆ ಎಂಬ ಪ್ರಾಥಮಿಕ ಮಾಹಿತಿ ಹೊರಬಂದಿದೆ. ನೀರು ಸಂಗ್ರಹ, ಕಟ್ಟಡದ ಅಡಿಪಾಯದ ಸ್ಥಿತಿ ಮತ್ತು ನಡೆಯುತ್ತಿದ್ದ ಕಾಮಗಾರಿಗಳಂತಹ ಅಂಶಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಆದರೆ ಕಟ್ಟಡ ಕುಸಿತಕ್ಕೆ ನಿಖರ ಕಾರಣ ಇನ್ನೂ ಅಂತಿಮವಾಗಿ ದೃಢಪಟ್ಟಿಲ್ಲ.

ಈ ದುರಂತದ ಹಿನ್ನೆಲೆಯಲ್ಲಿ ದೆಹಲಿಯ ವಿದ್ಯಾರ್ಥಿ ವಸತಿ ಪ್ರದೇಶಗಳು ಹಾಗೂ ಹಳೆಯ ಕಟ್ಟಡಗಳ ಸುರಕ್ಷತೆ ಕುರಿತು ಮತ್ತೊಮ್ಮೆ ಗಂಭೀರ ಚರ್ಚೆ ಆರಂಭವಾಗಿದೆ. ಇದೇ ವೇಳೆ, ದೆಹಲಿ ಹೈಕೋರ್ಟ್ ಕೂಡ ಘಟನೆಯ ಕುರಿತು ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಒಪ್ಪಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.