ಖ್ಯಾತ ಸ್ಯಾಂಡಲ್‌ವುಡ್ ನಟ ‘ದುನಿಯಾ’ ವಿಜಯ್ ದೀರ್ಘಕಾಲದ ಮದುವೆ ಬಂಧಕ್ಕೆ ಹೈಕೋರ್ಟ್ ವಿಚ್ಛೇದನ ಮಂಜೂರು ಮಾಡಿದ ಬೆನ್ನಲ್ಲೇ, ಪತ್ನಿ ನಾಗರತ್ನ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಹಾಗೂ ಭಾವನಾತ್ಮಕ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ವಿಚ್ಛೇದನ ಮಂಜೂರಾದ ಬಳಿಕ ನಾಗರತ್ನ ನೀಡಿದ ಮೊದಲ ಪ್ರತಿಕ್ರಿಯೆ ಇದಾಗಿದ್ದು, ತಮ್ಮ ಜೀವನದಲ್ಲಾದ ಮಾನಸಿಕ ನೋವುಗಳ ಬಗ್ಗೆ ಮುಕ್ತವಾಗಿ ಬರೆದುಕೊಂಡಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ ಮಾಧ್ಯಮದವರಿಗೆ ಹಾಗೂ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿರುವ ನಾಗರತ್ನ, “ಇಷ್ಟು ವರ್ಷಗಳ ಕಾಲ ಮಕ್ಕಳ ಭವಿಷ್ಯ ಹಾಗೂ ಒಳಿತಿಗಾಗಿ ಎಲ್ಲವನ್ನು ಸಹಿಸಿಕೊಂಡು, ಮದುವೆಯನ್ನು ಉಳಿಸಿಕೊಳ್ಳುವ ಆಶಯದಿಂದ ವಿಚ್ಛೇದನವನ್ನು ವಿರೋಧಿಸುತ್ತಲೇ ಬಂದಿದ್ದೆ. ಆದ್ರೆ, ವೈವಾಹಿಕ ಜೀವನದ ಹೊರಗಿನ ಅನೈತಿಕ ಸಂಬಂಧಕ್ಕೆ ಕಾನೂನುಬದ್ಧ ಮುದ್ರೆ ಒತ್ತುವುದೇ ಈ ಹೋರಾಟದ ಉದ್ದೇಶವಾಗಿದ್ದರೆ, ಕೊನೆಗೂ ಅದು ಈಡೇರಿದೆ” ಎಂದು ನೇರವಾಗಿ ಆರೋಪಿಸಿದ್ದಾರೆ.
ಅಲ್ಲದೆ, ತಾವು ಅನುಭವಿಸಿದ ‘ನಾರ್ಸಿಸಿಸ್ಟಿಕ್ ಅಬ್ಯೂಸ್’ (Narcissistic Abuse) ಹಾಗೂ ಹೊರಗಿನವರಿಗೆ ಕಾಣದ ಆಳವಾದ ಮಾನಸಿಕ ನೋವಿನ ಕುರಿತು ಉಲ್ಲೇಖಿಸಿದ್ದಾರೆ. ಯಾರ ಮೇಲೆಯೂ ಆರೋಪ ಹೊರಿಸಲು ಅಲ್ಲ, ಬದಲಿಗೆ ಇದೇ ಪರಿಸ್ಥಿತಿಯಲ್ಲಿರುವ ಮಹಿಳೆಯರಿಗೆ ಧೈರ್ಯ ತುಂಬಲು ತಮ್ಮ ಅನುಭವಗಳನ್ನು ಸೂಕ್ತ ಸಮಯದಲ್ಲಿ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.
“ನನ್ನ ಮೂವರು ಮಕ್ಕಳ ಭವಿಷ್ಯವೇ ನನಗೆ ಯಾವಾಗಲೂ ಮೊದಲ ಆದ್ಯತೆ. ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿರುವಾಗ ನನ್ನ ವೈಯಕ್ತಿಕ ನೋವುಗಳ ನೆರಳು ಬೀಳುವುದು ಇಷ್ಟವಿಲ್ಲ. ಆದ್ದರಿಂದ ಸದ್ಯಕ್ಕೆ ಮೌನವಾಗಿದ್ದೇನೆ. ವಿಜಯ್ ಕುಮಾರ್ ಅವರು ತಮ್ಮ ಜೀವನದಲ್ಲಿ ಸಂತೋಷವಾಗಿರಲಿ, ಉಳಿದದ್ದನ್ನು ಕಾಲ ಮತ್ತು ಕರ್ಮಕ್ಕೆ ಬಿಡುತ್ತೇನೆ” ಎಂದು ಬರೆದು ತಮ್ಮ ಪೋಸ್ಟ್ ಕೊನೆಗೊಳಿಸಿದ್ದಾರೆ.





















