ಬರ ವೀಕ್ಷಣೆಗೆ ಸಿಎಂ ಆಗಮನ: ಸಿಎಂ ಸಾಗುವ ರಸ್ತೆಗೆ ಮಾತ್ರ ತೇಪೆ – ಬಾಗಲಕೋಟೆಯಲ್ಲಿ ವ್ಯವಸ್ಥೆಯ ವಿರುದ್ಧ ಟೀಕೆ
ಬಾಗಲಕೋಟೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬರ ಪರಿಸ್ಥಿತಿ ವೀಕ್ಷಣೆಗೆ ಬಾಗಲಕೋಟೆ ಜಿಲ್ಲೆಗೆ ಶುಕ್ರವಾರ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ, ಅವರು ಸಂಚರಿಸುವ ಮಾರ್ಗದಲ್ಲಿನ ರಸ್ತೆ ಗುಂಡಿಗಳನ್ನು ತರಾತುರಿಯಲ್ಲಿ ಮುಚ್ಚಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಸಿಎಂ ಡಿ.ಕೆ. ಶಿವಕುಮಾರ್ ಅವರು ಕೂಡಲಸಂಗಮಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿ, ಅಲ್ಲಿಂದ ರಸ್ತೆ ಮಾರ್ಗವಾಗಿ ಬಾಗಲಕೋಟೆಗೆ ತೆರಳಿ ಬರ ಪರಿಸ್ಥಿತಿ ಹಾಗೂ ಸಂಬಂಧಿತ ವಿಚಾರಗಳ ಕುರಿತು ಪರಿಶೀಲನೆ ನಡೆಸಲಿದ್ದಾರೆ. ಇತ್ತೀಚೆಗೆ ಅವರು ಗದಗ ಸೇರಿದಂತೆ ಬರಪೀಡಿತ ಪ್ರದೇಶಗಳ ಪರಿಸ್ಥಿತಿ ಅವಲೋಕನಕ್ಕೆ ಭೇಟಿ ನೀಡಿದ್ದು, ಬರ ಪರಿಸ್ಥಿತಿಯ ಕುರಿತು ಅಧಿಕಾರಿಗಳಿಂದ ವರದಿಗಳನ್ನು ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇದರ ನಡುವೆಯೇ ಸಿಎಂ ಸಾಗಲಿರುವ ರಸ್ತೆಯಲ್ಲಿದ್ದ ಗುಂಡಿಗಳನ್ನು ಅಧಿಕಾರಿಗಳು ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಸ್ಥಳೀಯರ ಆರೋಪದ ಪ್ರಕಾರ, ಗಣ್ಯರ ಭೇಟಿ ಸಂದರ್ಭದಲ್ಲಷ್ಟೇ ರಸ್ತೆ ಗುಂಡಿಗಳನ್ನು ಮುಚ್ಚುವ ಬದಲು, ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿರುವ ಗುಂಡಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ.
ಇನ್ನು ಸಿಎಂ ಸಂಚರಿಸುವ ಮಾರ್ಗದ ಒಂದು ಬದಿಯ ರಸ್ತೆ ಗುಂಡಿಗಳಿಗೆ ಮಾತ್ರ ತೇಪೆ ಹಾಕಲಾಗುತ್ತಿದ್ದು, ಇನ್ನೊಂದು ಬದಿಯ ಗುಂಡಿಗಳನ್ನು ಹಾಗೆಯೇ ಬಿಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಸಿಎಂ ಭೇಟಿ ಹಿನ್ನೆಲೆಯಲ್ಲಿ ಕೆಲವೇ ಗಂಟೆಗಳ ಮುನ್ನ ದುರಸ್ತಿ ಕಾರ್ಯ ನಡೆಯುತ್ತಿರುವುದು ಸಾರ್ವಜನಿಕರ ಚರ್ಚೆಗೆ ಕಾರಣವಾಗಿದೆ.
ಪ್ರತಿನಿತ್ಯ ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಚರಿಸುವ ರಸ್ತೆಗಳ ಗುಂಡಿಗಳನ್ನು ಅಧಿಕಾರಿಗಳು ಮೊದಲೇ ಗುರುತಿಸಿ ದುರಸ್ತಿ ಮಾಡಬೇಕಿತ್ತು. ಆದರೆ ಗಣ್ಯರ ಭೇಟಿ ಸಂದರ್ಭದಲ್ಲಿ ಮಾತ್ರ ರಸ್ತೆ ದುರಸ್ತಿ ಕಾರ್ಯಕ್ಕೆ ವೇಗ ಸಿಗುತ್ತಿರುವುದು ಎಷ್ಟು ಸಮಂಜಸ ಎಂಬ ಪ್ರಶ್ನೆಯನ್ನು ಸ್ಥಳೀಯರು ಎತ್ತಿದ್ದಾರೆ.
ಸಿಎಂ ಆಗಮನಕ್ಕಾಗಿ ಮಾತ್ರವಲ್ಲದೆ, ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ಜಿಲ್ಲೆಯ ಗುಂಡಿಮಯ ರಸ್ತೆಗಳ ಸಮಗ್ರ ದುರಸ್ತಿಗೆ ಅಧಿಕಾರಿಗಳು ಮುಂದಾಗಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.





















