ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿ ಇನ್ನಷ್ಟು ವಿಜೃಂಭಣೆ ಹಾಗೂ ಅದ್ಧೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ಬೃಹತ್ ಯೋಜನೆ ರೂಪಿಸಿದೆ. ಹಬ್ಬದ ಮೆರುಗನ್ನು ಹೆಚ್ಚಿಸಲು ದಕ್ಷಿಣ ಭಾರತದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ವಿದೇಶಿ ರಾಯಭಾರಿಗಳು ಹಾಗೂ ದೇಶಾದ್ಯಂತದ ಸಾಂಸ್ಕೃತಿಕ ತಂಡಗಳಿಗೆ ಆಹ್ವಾನ ನೀಡುವಂತೆ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ಸಾಂಸ್ಕೃತಿಕ ಮೆರವಣಿಗೆಯ ವೈಭವವನ್ನು ಹೆಚ್ಚಿಸಲು ಭಾರತೀಯ ಭೂಸೇನೆ, ನೌಕಾಪಡೆ ಹಾಗೂ ವಾಯುಪಡೆಯ ವಿಶೇಷ ತುಕಡಿಗಳನ್ನು ದಸರಾದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಸಿದ್ಧತೆ ನಡೆಸಲಾಗಿದೆ. ಇದರೊಂದಿಗೆ ಸಾರ್ವಜನಿಕರ ಹಾಗೂ ಪ್ರವಾಸಿಗರ ಆಕರ್ಷಣೆಗಾಗಿ ರೋಮಾಂಚಕ ಏರ್ ಶೋ (ವಾಯು ಪ್ರದರ್ಶನ) ಮತ್ತು ನಯನಮನೋಹರ ಡ್ರೋನ್ ಶೋಗಳನ್ನು ಆಯೋಜಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ.
ಸಾಂಪ್ರದಾಯಿಕ ಕಾರ್ಯಕ್ರಮಗಳ ಜೊತೆಗೆ ವಿಂಟೇಜ್ ಕಾರ್ ರ‍್ಯಾಲಿ, ಕಲಾ ಮೇಳ, ಫ್ಲೀ ಮಾರ್ಕೆಟ್ ಮತ್ತು ವರ್ಣರಂಜಿತ ರಂಗೋಲಿ ಸ್ಪರ್ಧೆಗಳು ಈ ಬಾರಿಯ ದಸರಾಗೆ ವಿಶೇಷ ಮೆರಗು ನೀಡಲಿವೆ. ನಾಡಹಬ್ಬವನ್ನು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಗೊಳಿಸಲು ಮತ್ತು ದೇಶ-ವಿದೇಶಗಳ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಈ ಹೊಸ ಸಾಹಸಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.






















