SK Home Ad
Home ನಮ್ಮ ಜಿಲ್ಲೆ ಧಾರವಾಡ ಹು-ಧಾ ನೂತನ ಪೊಲೀಸ್ ಕಮೀಶನರ್ ಬೋರಸೆ ಅಧಿಕಾರ ಸ್ವೀಕಾರ

ಹು-ಧಾ ನೂತನ ಪೊಲೀಸ್ ಕಮೀಶನರ್ ಬೋರಸೆ ಅಧಿಕಾರ ಸ್ವೀಕಾರ

0
15

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್‌ನ ನೂತನ ಪೊಲೀಸ್ ಆಯುಕ್ತರಾಗಿ ಭೂಷಣ ಜಿ ಬೋರಸೆ ಅವರು ಗುರುವಾರ ಅಧಿಕಾರ ವಹಿಸಿಕೊಂಡರು.

ಗುರುವಾರ ಮಧ್ಯಾಹ್ನ ಆಯುಕ್ತಾಲಯ ಕಚೇರಿಗೆ ಆಗಮಿಸಿದ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು. ನಿರ್ಗಮಿತ ಆಯುಕ್ತ ಎನ್. ಶಶಿಕುಮಾರ್ ಅವರು ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಡಿಸಿಪಿ ಶೃತಿ ಎನ್.ಎಸ್. ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ನಂತರ ಮಾತನಾಡಿದ ನೂತನ ಆಯುಕ್ತರು, ಬೆಂಗಳೂರು ಹೊರತುಪಡಿಸಿದರೆ ಹುಬ್ಬಳ್ಳಿ-ಧಾರವಾಡವೇ ದೊಡ್ಡ ಮಹಾನಗರ. ರಸ್ತೆ ಸುರಕ್ಷತೆ, ಮಕ್ಕಳ-ಮಹಿಳೆಯರ ರಕ್ಷಣೆ, ಸೈಬರ್ ಅಪರಾಧ ತಡೆ ಮತ್ತು ಡ್ರಗ್ಸ್ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಡ್ರಗ್ಸ್ ಅಂತಾರಾಷ್ಟ್ರೀಯ ಸಮಸ್ಯೆಯಾಗಿದೆ. ಅದರ ಮೂಲ ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೆಳಗಾವಿಯಲ್ಲಿ ಡ್ರಗ್ಸ್ ತಡೆಗೆ ಕೋಕಾ ಕಾಯ್ದೆ ಜಾರಿ ಮಾಡಿದ್ದೆವು. ಅದೇ ಮಾದರಿಯಲ್ಲಿ ಇಲ್ಲಿ ಗೂಂಡಾ ಕಾಯ್ದೆ, ಗಡಿಪಾರು ಕ್ರಮ ಜಾರಿ ಮಾಡಲಾಗುವುದು. ಕಾನೂನಿನ ಮುಂದೆ ಯಾರು ದೊಡ್ಡವರಲ್ಲ, ಯಾರು ಕಾನೂನು ಉಲ್ಲಂಘಿಸುತ್ತಾರೋ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಂಚಾರ ಸಮಸ್ಯೆ ಪರಿಹಾರಕ್ಕೆ ಐಐಟಿ ಮತ್ತು ಎಂಜಿನಿಯರಿಂಗ್ ಕಾಲೇಜುಗಳ ನೆರವು ಪಡೆದು, ಸಿಸಿಟಿವಿ ಆಧಾರಿತ ನಿರ್ವಹಣೆ ಮಾಡಲಾಗುವುದು. ಪೀಕ್ ಅವಧಿಯಲ್ಲಿ ದಂಡಕ್ಕಿಂತ ಸಂಚಾರ ಸುಗಮಕ್ಕೆ ಆದ್ಯತೆ ನೀಡಲಾಗುವುದು. ಚಾಕು ಇರಿತ ಪ್ರಕರಣ ತಡೆಗೆ ಬೆಳಗಾವಿ ಮಾದರಿಯಲ್ಲಿ ಆ್ಯಂಟಿ-ಸ್ಟ್ಯಾಬಿಂಗ್ ಸ್ಕ್ವಾಡ್ ರಚಿಸಲಾಗುವುದು ಎಂದು ತಿಳಿಸಿದರು.