SK Home Ad
Home ಸಿನಿ ಮಿಲ್ಸ್ ಕೋರ್ಟ್ ಆದೇಶಕ್ಕೆ ಶಿರಸಾಷ್ಟಾಂಗ ನಮಸ್ಕಾರ; ಡಿವೋರ್ಸ್‌ ಬಳಿಕ ನಟ ದುನಿಯಾ ವಿಜಯ್ ಹೇಳಿದ್ದೇನು?

ಕೋರ್ಟ್ ಆದೇಶಕ್ಕೆ ಶಿರಸಾಷ್ಟಾಂಗ ನಮಸ್ಕಾರ; ಡಿವೋರ್ಸ್‌ ಬಳಿಕ ನಟ ದುನಿಯಾ ವಿಜಯ್ ಹೇಳಿದ್ದೇನು?

0
69

ಸ್ಯಾಂಡಲ್‌ವುಡ್ ನಟ ‘ದುನಿಯಾ’ ವಿಜಯ್ ತಮ್ಮ ದಾಂಪತ್ಯ ಜೀವನಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ ಮಹತ್ವದ ತೀರ್ಪನ್ನು ಗೌರವಪೂರ್ವಕವಾಗಿ ಸ್ವೀಕರಿಸಿದ್ದಾರೆ. ತಮ್ಮ ವೈಯಕ್ತಿಕ ಸಾಂಸಾರಿಕ ವಿವಾದಕ್ಕೆ ಸಂಬಂಧಿಸಿದಂತೆ ಮಾನ್ಯ ಉಚ್ಚ ನ್ಯಾಯಾಲಯವು ನೀಡಿದ ಆದೇಶಕ್ಕೆ ಶಿರಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸಿರುವ ನಟ, ಕಾನೂನಿನ ಮೇಲಿನ ತಮ್ಮ ನಂಬಿಕೆ ಮತ್ತಷ್ಟು ಹೆಚ್ಚಾಗಿದೆ ಎಂದು ತಿಳಿಸಿ ಪತ್ರ ಬರೆದಿದ್ದಾರೆ.

ತಮ್ಮ ಮೇಲಾಗಿದ್ದ ಮಾನಸಿಕ ಕ್ರೌರ್ಯವನ್ನು ಪರಿಗಣಿಸಿ ಸೂಕ್ತ ತೀರ್ಪು ನೀಡಿದ ಮಾನ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಡಿ.ಕೆ. ಸಿಂಗ್ ಹಾಗೂ ಶ್ರೀ ಶಾಂತಿಭೂಷಣ್ ಅವರ ಆದೇಶಕ್ಕೆ ತಲೆಬಾಗುವುದಾಗಿ ವಿಜಯ್ ಹೇಳಿದ್ದಾರೆ. ಇದೇ ವೇಳೆ, ಕಾನೂನು ಹೋರಾಟದಲ್ಲಿ ತಮಗೆ ಮಾರ್ಗದರ್ಶನ ನೀಡಿದ ಹಿರಿಯ ವಕೀಲರಾದ ಶ್ರೀವತ್ಸ ಮತ್ತು ಯುಕ್ತ ಅನಿಲ್ ಅವರಿಗೆ ತಮ್ಮ ಹೃತ್ತೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಈ ಸೂಕ್ಷ್ಮ ವಿಚಾರದ ಕುರಿತು ಮಾಧ್ಯಮಗಳಲ್ಲಾಗಲಿ ಅಥವಾ ಸಾರ್ವಜನಿಕ ವೇದಿಕೆಯಲ್ಲಾಗಲಿ ಮಾತನಾಡಲು ತಮಗೆ ಇಷ್ಟವಿಲ್ಲ ಎಂದು ವಿಜಯ್ ಸ್ಪಷ್ಟಪಡಿಸಿದ್ದಾರೆ. ತಮ್ಮ ಹೆಣ್ಣುಮಕ್ಕಳು ಈಗ ವಯಸ್ಕರಾಗಿದ್ದು, ಸಮಾಜದಲ್ಲಿ ತಮ್ಮದೇ ಆದ ಗೌರವ ಹಾಗೂ ಸ್ಥಾನಮಾನ ಗಳಿಸಿದ್ದಾರೆ. ಈ ನಿರ್ಧಾರದಿಂದ ಅವರಿಗೆ ಯಾವುದೇ ರೀತಿಯ ಮುಜುಗರ ಉಂಟಾಗಬಾರದು ಎಂಬುದು ವಿಜಯ್ ಆಶಯವಾಗಿದೆ.

ಮಕ್ಕಳ ಭವಿಷ್ಯ ಹಾಗೂ ಹಿತದೃಷ್ಟಿಯಿಂದ ನ್ಯಾಯಾಲಯ ನೀಡಿದ ಈ ಆದೇಶವನ್ನು ಆತ್ಮಸಾಕ್ಷಿಯಿಂದ ಸ್ವೀಕರಿಸುತ್ತಿರುವುದಾಗಿ ತಿಳಿಸಿರುವ ನಟ ವಿಜಯ್, ಇಲ್ಲಿಂದ ತಮ್ಮ ಜೀವನದ ಹೊಸ ಪ್ರಯಾಣವನ್ನು ಆರಂಭಿಸುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೇ… ತಮ್ಮ ಬದುಕಿನುದ್ದಕ್ಕೂ ಜೊತೆಯಾಗಿ ನಿಂತ ಅಭಿಮಾನಿಗಳು ಹಾಗೂ ಮಾಧ್ಯಮ ಮಿತ್ರರು ಮುಂದೆ ಕೂಡ ತಮ್ಮ ಆಶೀರ್ವಾದ ಮತ್ತು ಹಾರೈಕೆಯನ್ನು ಹೀಗೆಯೇ ಮುಂದುವರಿಸಬೇಕೆಂದು ಕಳಕಳಿಯ ಮನವಿ ಮಾಡಿದ್ದಾರೆ.