ಬಳ್ಳಾರಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಹಣದಿಂದಲೇ ಲೋಕಸಭಾ ಚುನಾವಣೆಯಲ್ಲಿ ಗೆದ್ದಿರುವ ತುಕಾರಾಂ ಅವರಿಗೆ ಬಿಜೆಪಿ ನಾಯಕರ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ ಎಂದು ಮಾಜಿ ಶಾಸಕ ಸುರೇಶ್‌ಬಾಬು ವಾಗ್ದಾಳಿ ನಡೆಸಿದರು.
ಬಳ್ಳಾರಿಯಲ್ಲಿ ಮಾತನಾಡಿದ ಅವರು, “ತುಕಾರಾಂ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಅದೇ ವೇಳೆ ಜನಾರ್ದನ ರೆಡ್ಡಿ ಕೂಡ ರಾಜೀನಾಮೆ ನೀಡುತ್ತಾರೆ. ಇಬ್ಬರೂ ಒಟ್ಟಿಗೆ ಚುನಾವಣೆ ಎದುರಿಸೋಣ. ಯಾರು ಗೆಲ್ಲುತ್ತಾರೆ ಎಂಬುದನ್ನು ಜನರೇ ತೀರ್ಮಾನಿಸಲಿ” ಎಂದು ಸವಾಲು ಹಾಕಿದರು.
ಸ್ಪೀಕರ್ ಅಪಾಯಿಂಟ್‌ಮೆಂಟ್ ತೆಗೆದುಕೊಂಡರೆ ಜನಾರ್ದನ ರೆಡ್ಡಿ ರಾಜೀನಾಮೆ ನೀಡಲು ಸಿದ್ಧರಿದ್ದಾರೆ. ತುಕಾರಾಂ ಕೂಡ ರಾಜೀನಾಮೆ ನೀಡುವ ಧೈರ್ಯ ತೋರಿಸಲಿ ಎಂದು ಅವರು ಹೇಳಿದರು.
ತುಂಗಭದ್ರಾ ನೀರಿನಲ್ಲೂ ರಾಜಕೀಯ : ತುಂಗಭದ್ರಾ ಜಲಾಶಯದಲ್ಲಿ ನೀರಿದ್ದರೂ ರೈತರಿಗೆ ನೀರು ಬಿಡದೆ ಕಾಂಗ್ರೆಸ್ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಸುರೇಶ್‌ಬಾಬು ಆರೋಪಿಸಿದರು. “ನಮ್ಮ ಸರ್ಕಾರ ಇದ್ದಾಗ ರೈತರಿಗೆ ನೀರಿನ ಸಮಸ್ಯೆಯೇ ಬಂದಿರಲಿಲ್ಲ” ಎಂದು ಹೇಳಿದರು.
‘ಆಗ ಕುಟುಂಬ ಒಡೆದಿತ್ತು, ಈಗ ನಾವೆಲ್ಲ ಒಂದಾಗಿದ್ದೇವೆ’ : ಕಳೆದ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟಿದ್ದರಿಂದ ತಮ್ಮ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ತಾವು ಸೇರಿದಂತೆ ಹಲವರು ಅವರಿಂದ ದೂರವಿದ್ದ ಕಾರಣ ಸೋಲು ಕಂಡಿದ್ದೇವೆ. “ಈಗ ನಾವೆಲ್ಲರೂ ಒಟ್ಟಾಗಿದ್ದೇವೆ. ನಮ್ಮನ್ನು ಸೋಲಿಸಿ ನೋಡಲಿ” ಎಂದು ಸುರೇಶ್‌ಬಾಬು ಸವಾಲು ಹಾಕಿದರು.
ಮೊಳಕಾಲ್ಮೂರು ಸ್ಪರ್ಧೆ ವಿಚಾರಕ್ಕೆ ತೆರೆ : ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ನಾಯಕನಹಟ್ಟಿ ತಿಪ್ಪೇಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು ರಾಜಕೀಯ ಉದ್ದೇಶದಿಂದಲ್ಲ. ದೇವಸ್ಥಾನಕ್ಕೆ ಹೋಗಿದ್ದ ವೇಳೆ ಕಾರ್ಯಕರ್ತರು ಬಂದಿದ್ದರು. ತಾನು ಎಲ್ಲಿಯೂ ಅಭ್ಯರ್ಥಿ ಎಂದು ಹೇಳಿಲ್ಲ. ಇದಕ್ಕೆ ರಾಜಕೀಯ ಬಣ್ಣ ಕಟ್ಟಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.





















