‘ಹಣ ತಿಂದಿದ್ದರೆ ತಪ್ಪು ಒಪ್ಪಿಕೊಳ್ಳಿ – ಚಿಲ್ಲರೆ ಮಾತು ಬಿಟ್ಟು ಜನರ ಸಮಸ್ಯೆ ನೋಡಿ’ : ಮಾಜಿ ಸಂಸದ ಸಣ್ಣ ಫಕೀರಪ್ಪ
ಬಳ್ಳಾರಿ: ಮಾಜಿ ಸಚಿವ ಬಿ.ನಾಗೇಂದ್ರ ಅವರ ಇತ್ತೀಚಿನ ಹೇಳಿಕೆಗಳಿಗೆ ತೀವ್ರ ತಿರುಗೇಟು ನೀಡಿರುವ ಮಾಜಿ ಸಂಸದ ಸಣ್ಣ ಫಕೀರಪ್ಪ, ನಾಗೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು. ಸಚಿವ ಸ್ಥಾನ ಕಳೆದುಕೊಂಡ ಹತಾಶೆಯಿಂದ ನಾಗೇಂದ್ರ ಹುಚ್ಚುಹುಚ್ಚಾಗಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು. ನಾಗೇಂದ್ರ ಅವರ ಮಾತುಗಳಲ್ಲಿ ಯಾವುದೇ ಅರ್ಥವಿಲ್ಲ. ಬಿಜೆಪಿ ನಾಯಕರ ವಿರುದ್ಧ ವೈಯಕ್ತಿಕ ಟೀಕೆ ಮಾಡುವ ಬದಲು ತಮ್ಮ ಕ್ಷೇತ್ರದ ಜನರ ಸಮಸ್ಯೆಗಳತ್ತ ಗಮನ ಹರಿಸಲಿ ಎಂದು ಹೇಳಿದರು.
‘ಎರಡು ಬಾರಿ ಶಾಸಕರಾಗಿ ಎಷ್ಟು ಬಾರಿ ಬಳ್ಳಾರಿ ಗ್ರಾಮಾಂತರಕ್ಕೆ ಬಂದಿದ್ದೀರಿ?’ ಎಂದು ಪ್ರಶ್ನಿಸಿದ ಫಕೀರಪ್ಪ, ನಾಗೇಂದ್ರ ಅವರನ್ನು ಜನರು ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ, ಸಚಿವರನ್ನಾಗಿ ಅಲ್ಲ ಎಂದರು. ಗ್ರಾಮಾಂತರ ಭಾಗದ ಜನರು ನೀರಿಗಾಗಿ ಪರದಾಡುತ್ತಿರುವಾಗ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ರಾಜಕೀಯ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವುದು ಸರಿಯಲ್ಲ ಎಂದು ಹೇಳಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ವಿಚಾರವಾಗಿ ನಾಗೇಂದ್ರ ವಿರುದ್ಧವೂ ಪ್ರಶ್ನೆಗಳನ್ನು ಎತ್ತಿದ ಫಕೀರಪ್ಪ, ಹಣದ ಅವ್ಯವಹಾರದಲ್ಲಿ ತಪ್ಪು ಮಾಡಿದ್ದರೆ ಅದನ್ನು ಒಪ್ಪಿಕೊಂಡು ಜನರ ಮುಂದೆ ಸ್ಪಷ್ಟನೆ ನೀಡುವುದು ಉತ್ತಮ ಎಂದರು. ಜನಾರ್ದನ ರೆಡ್ಡಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ನಾಗೇಂದ್ರ ಮಾಡುತ್ತಿರುವ ವೈಯಕ್ತಿಕ ಟೀಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, “ನಾಗೇಂದ್ರ ಅವರೇ, ಜೇನುಗೂಡಿಗೆ ಕಲ್ಲು ಎಸೆಯುವ ಕೆಲಸ ಮಾಡಬೇಡಿ. ವೈಯಕ್ತಿಕ ನಿಂದನೆಗಳಿಂದ ನಿಮ್ಮ ವರ್ಚಸ್ಸು ಹೆಚ್ಚುವುದಿಲ್ಲ; ಬದಲಾಗಿ ಮತ್ತಷ್ಟು ಕುಸಿಯುತ್ತದೆ” ಎಂದು ಹೇಳಿದರು.
‘ನಮ್ಮ ಸಮುದಾಯ’ ಎಂಬ ವಿಚಾರ ಮುಂದಿಟ್ಟುಕೊಂಡು ಮಾತನಾಡುವುದು ಸರಿಯಲ್ಲ. “ನೀನೊಬ್ಬನೇ ಬಳ್ಳಾರಿಯವನಲ್ಲ. ನಾವೇನು ಪಾಕಿಸ್ತಾನದವರಾ?” ಎಂದು ಪ್ರಶ್ನಿಸಿದ ಅವರು, ಎಲ್ಲ ಸಮುದಾಯದವರೂ ಬಳ್ಳಾರಿಯವರೇ ಎಂದರು. ಜನಾರ್ದನ ರೆಡ್ಡಿ ಬಗ್ಗೆ ಹೆಚ್ಚು ಮಾತನಾಡಿದಷ್ಟೂ ನಾಗೇಂದ್ರ ಅವರ ರಾಜಕೀಯ ತೂಕ ಕಡಿಮೆಯಾಗುತ್ತದೆ. ರೌಡಿಸಂ, ಬೆದರಿಕೆ ರೀತಿಯ ಮಾತುಗಳಿಂದ ರಾಜಕೀಯ ಮಾಡಲು ಸಾಧ್ಯವಿಲ್ಲ. ತಮ್ಮ ರಾಜಕೀಯ ಜೀವನದಲ್ಲಿ ನಾಗೇಂದ್ರ ಅವರಂತಹ ಹಲವರನ್ನು ನೋಡಿದ್ದೇನೆ ಎಂದು ಫಕೀರಪ್ಪ ಹೇಳಿದರು.
“2028ರಲ್ಲಿ ಬನ್ನಿ. ಗೆದ್ದು ತೋರಿಸಿ, ಆಗ ನಿಮ್ಮ ರಾಜಕೀಯ ಶಕ್ತಿ ಎಷ್ಟಿದೆ ಎಂಬುದು ಗೊತ್ತಾಗುತ್ತದೆ” ಎಂದು ನಾಗೇಂದ್ರಗೆ ಸವಾಲು ಹಾಕಿದರು.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.





















