ಅಭಿವೃದ್ಧಿ ಕೆಲಸಗಳಿಗೆ ತಾಯಿಯ ಹೆಸರು; ಬಳ್ಳಾರಿಯಲ್ಲಿ ಗಾಂಜಾ, ಓಸಿ, ಮರಳು ದಂಧೆ – ಬಿಜೆಪಿ ಮುಖಂಡರ ಆರೋಪ
ಬಳ್ಳಾರಿ: ಕಾಂಗ್ರೆಸ್–ಬಿಜೆಪಿ ನಾಯಕರ ನಡುವಿನ ವಾಕ್ಸಮರ ತೀವ್ರಗೊಂಡಿದ್ದು, ಶಾಸಕ ಭರತ್ ರೆಡ್ಡಿ ವಿರುದ್ಧ ಮಾಜಿ ಶಾಸಕ ಜಿ. ಸೋಮಶೇಖರ್ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದರು.
ಬಳ್ಳಾರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳಿಗೆ ಭರತ್ ರೆಡ್ಡಿ ತಮ್ಮ ತಾಯಿಯ ಹೆಸರು ಇಡುತ್ತಿದ್ದಾರೆ. ಸರ್ಕಾರದ ಕೆಲಸಗಳಿಗೂ ‘ಸುವರ್ಣ ಬಳ್ಳಾರಿ’ ಎಂದು ತಾಯಿಯ ಹೆಸರು ಬಳಸುತ್ತಿದ್ದಾರೆ’ ಎಂದು ಟೀಕಿಸಿದರು.
ಜನಾರ್ದನ ರೆಡ್ಡಿ ಜೈಲಿಗೆ ಹೋಗಿದ್ದ ವಿಚಾರ ಪ್ರಸ್ತಾಪಿಸುತ್ತಿರುವ ಭರತ್ ರೆಡ್ಡಿ, ಮೊದಲು ತಮ್ಮ ಕುಟುಂಬದ ಹಿನ್ನೆಲೆ ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದ ಸೋಮಶೇಖರ್ ರೆಡ್ಡಿ, ಭರತ್ ರೆಡ್ಡಿ ಅವರ ಅತ್ತೆ ರಾಣಿ ಸಂಯುಕ್ತ ವಿರುದ್ಧ ಎಸ್‌ಐಟಿ ಮತ್ತು ಸಿಬಿಐ ಪ್ರಕರಣಗಳಿದ್ದವು. ಅವರು ಜೈಲಿಗೂ ಹೋಗಿದ್ದರು. ಜನಾರ್ದನ ರೆಡ್ಡಿ ಅವರೊಂದಿಗೇ ಜೈಲಿನಲ್ಲಿದ್ದರು ಎಂದು ಆರೋಪಿಸಿದರು.
‘ಜನಾರ್ದನ ರೆಡ್ಡಿ ಸ್ವಾತಂತ್ರ್ಯ ಹೋರಾಟಗಾರನಾ ಎಂದು ಪ್ರಶ್ನಿಸುತ್ತೀರಾ? ನಿಮ್ಮ ಅತ್ತೆ ಸ್ವಾತಂತ್ರ್ಯ ಹೋರಾಟಗಾರರೇ?’ ಎಂದು ಪ್ರಶ್ನಿಸಿದ ಅವರು, ಭರತ್ ರೆಡ್ಡಿ ತಂದೆ ಸೂರ್ಯನಾರಾಯಣ ರೆಡ್ಡಿ ವಿರುದ್ಧವೂ ಅಕ್ರಮ ಗಣಿಗಾರಿಕೆ ಪ್ರಕರಣವಿದೆ ಎಂದು ಆರೋಪಿಸಿದರು.
ವಾಲ್ಮೀಕಿ ನಿಗಮದ ಹಣಕಾಸು ಅಕ್ರಮ ಪ್ರಕರಣವನ್ನೂ ಪ್ರಸ್ತಾಪಿಸಿದ ಅವರು, ಈ ಹಗರಣವನ್ನೇ ಮುಂದಿಟ್ಟುಕೊಂಡು ಲೋಕಸಭೆ ಚುನಾವಣೆ ಎದುರಿಸಲಾಗಿದೆ ಎಂದು ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ ಎಂದರು. ಬ್ಯಾನರ್ ವಿವಾದ ಸೇರಿದಂತೆ ಇತ್ತೀಚಿನ ಬೆಳವಣಿಗೆಗಳಲ್ಲಿ ಕಾಂಗ್ರೆಸ್ ನಾಯಕರು ನಡೆದುಕೊಂಡ ರೀತಿಯೂ ಜನರಿಗೆ ಗೊತ್ತಿದೆ ಎಂದು ಟೀಕಿಸಿದರು.
ಬಳ್ಳಾರಿಯಲ್ಲಿ ಗಾಂಜಾ, ಓಸಿ, ಮರಳು ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಗುತ್ತಿಗೆದಾರರು ಕಾಮಗಾರಿ ಕೈಗೆತ್ತಿಕೊಳ್ಳಲು ಮುಂದೆ ಬರುತ್ತಿಲ್ಲ. ಗುತ್ತಿಗೆ ಕೆಲಸಗಳಲ್ಲೂ ರಾಜಕೀಯ ಹಸ್ತಕ್ಷೇಪವಿದೆ ಎಂದು ಸೋಮಶೇಖರ್ ರೆಡ್ಡಿ ಆರೋಪಿಸಿದರು.
ಇಡಿ ದಾಳಿಯ ವೇಳೆ ಚುನಾವಣೆಯಲ್ಲಿ ಕಾರ್ಪೊರೇಟರ್‌ಗಳಿಗೆ ಹಣ ಹಂಚಿಕೆ ಸಂಬಂಧಿಸಿದ ಚೀಟಿಗಳು ಸಿಕ್ಕಿವೆ ಎಂಬ ಆರೋಪವನ್ನೂ ಅವರು ಮಾಡಿದರು. ‘ನಾಗೇಂದ್ರ ಅವರಿಗೆ ರಾಜಕೀಯ ಜನ್ಮ ನೀಡಿದ್ದು ಜನಾರ್ದನ ರೆಡ್ಡಿ. ಇಂದು ಅವರ ವಿರುದ್ಧವೇ ಮಾತನಾಡುತ್ತಿದ್ದಾರೆ’ ಎಂದರು.
ಭರತ್ ರೆಡ್ಡಿಯನ್ನು ‘ಒನ್ ಟೈಂ ಎಂಎಲ್‌ಎ’ ಎಂದು ವ್ಯಂಗ್ಯವಾಡಿದ ಸೋಮಶೇಖರ್ ರೆಡ್ಡಿ, ಅವರ ತಂದೆಯೂ ‘ಒನ್ ಟೈಂ’ ಆಗಿದ್ದರು ಎಂದು ಟೀಕಿಸಿದರು. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಪರಸ್ಪರ ಸುದ್ದಿಗೋಷ್ಠಿ ನಡೆಸಿಕೊಂಡು ಆರೋಪ–ಪ್ರತ್ಯಾರೋಪ ಮಾಡುತ್ತಿರುವುದರಿಂದ ಜನರು ನಗುವಂತಾಗಿದೆ ಎಂದರು.
ಕೊನೆಯಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಕಿವಿಮಾತು ಹೇಳಿದ ಅವರು, ರಾಜಕೀಯ ಆರೋಪ–ಪ್ರತ್ಯಾರೋಪ ಬದಿಗಿಟ್ಟು ಬಳ್ಳಾರಿ ಅಭಿವೃದ್ಧಿಯತ್ತ ಗಮನಹರಿಸಿ, ಜನರಿಗೆ ಬೇಕಾದ ಕೆಲಸಗಳನ್ನು ಮಾಡಿ ಎಂದು ಸಲಹೆ ನೀಡಿದರು.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.




















