SK Home Ad
Home ನಮ್ಮ ಜಿಲ್ಲೆ ಮನೆಯಲ್ಲಿ ಗಂಡು-ಹೆಣ್ಣು ಮಕ್ಕಳ ವ್ಯತ್ಯಾಸ? ಪೋಷಕರೇ ದಯವಿಟ್ಟು ಗಮನಿಸಿ; ನೀವು ಕೇಳಲೇಬೇಕಾದ 4 ಕಿವಿಮಾತು

ಮನೆಯಲ್ಲಿ ಗಂಡು-ಹೆಣ್ಣು ಮಕ್ಕಳ ವ್ಯತ್ಯಾಸ? ಪೋಷಕರೇ ದಯವಿಟ್ಟು ಗಮನಿಸಿ; ನೀವು ಕೇಳಲೇಬೇಕಾದ 4 ಕಿವಿಮಾತು

0
39

ಒಂದು ಮಗುವಿನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಶಾಲೆ, ಸಮಾಜ ಮತ್ತು ಸ್ನೇಹಿತರ ಪಾತ್ರ ಎಷ್ಟಿದೆಯೋ, ಅದಕ್ಕಿಂತಲೂ ಹೆಚ್ಚಿನ ಪ್ರಭಾವ ಕುಟುಂಬದ ವಾತಾವರಣಕ್ಕಿದೆ. ವಿಶೇಷವಾಗಿ ಗಂಡು ಮಗುವಿಗೆ ಚಿಕ್ಕ ವಯಸ್ಸಿನಿಂದಲೇ ಹೆಣ್ಣು ಮಕ್ಕಳನ್ನು ಗೌರವಿಸುವುದು, ಮನೆಯ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು ಮತ್ತು ಉತ್ತಮ ನಡವಳಿಕೆಯನ್ನು ರೂಢಿಸಿಕೊಳ್ಳುವ ಪಾಠವನ್ನು ಪೋಷಕರು ಕಲಿಸಬೇಕಾದ ಅಗತ್ಯವಿದೆ.

ಒಂದು ಕುಟುಂಬದಲ್ಲಿ ಬೆಳೆದ ಹುಡುಗನಿಗೆ ಮನೆಯಲ್ಲಿರುವ ಅಮ್ಮ, ಅಕ್ಕ, ತಂಗಿ ಅಥವಾ ಇತರ ಮಹಿಳೆಯರನ್ನು ಗೌರವಿಸುವುದನ್ನು ಕಲಿಸಿದರೆ, ಮುಂದೆ ಸಮಾಜದಲ್ಲಿ ಪ್ರತಿಯೊಬ್ಬ ಹೆಣ್ಣಿಗೆ ಗೌರವದ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ.

ಮನೆ ಕೆಲಸ ಹೆಣ್ಣು ಮಕ್ಕಳದ್ದೇ ಅಲ್ಲ
ಬಹುತೇಕ ಕುಟುಂಬಗಳಲ್ಲಿ ಹುಡುಗಿಯರಿಗೆ ಚಿಕ್ಕ ವಯಸ್ಸಿನಿಂದಲೇ ಮನೆ ಕೆಲಸ, ಅಡುಗೆ, ಸ್ವಚ್ಛತೆ ಸೇರಿದಂತೆ ಹಲವು ಕೆಲಸಗಳನ್ನೂ ಕಲಿಸಲಾಗುತ್ತದೆ. ಆದರೆ ಅದೇ ಜವಾಬ್ದಾರಿಗಳನ್ನು ಹುಡುಗರಿಗೂ ಕಲಿಸುವುದು ಅಷ್ಟೇ ಮುಖ್ಯ.

ತನ್ನ ಬಟ್ಟೆಯನ್ನು ತಾನೇ ಜೋಡಿಸಿಕೊಳ್ಳುವುದು, ಕೊಠಡಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಊಟದ ನಂತರ ತನ್ನ ತಟ್ಟೆಯನ್ನು ತೆಗೆದುಕೊಂಡು ಹೋಗುವುದು, ಮನೆಯ ಕೆಲಸದಲ್ಲಿ ಪೋಷಕರಿಗೆ ಸಹಾಯ ಮಾಡುವುದು—ಇವು ಹುಡುಗನಿಗೂ ಕಲಿಸಬೇಕು.

ನೀನು ಹುಡುಗ ನಿನಗೆ ಈ ಕೆಲಸ ಬೇಡ”
ಮನೋಭಾವಕ್ಕಿಂತ, “ನೀನು ಈ ಮನೆಯ ಸದಸ್ಯ, ಹಾಗಾಗಿ ನಿನ್ನ ಜವಾಬ್ದಾರಿಯೂ ಇದೆ” ಎಂಬ ಅರಿವು ಮಕ್ಕಳಲ್ಲಿ ಬೆಳೆಸಬೇಕು.

ಮನೆಯ ನಿಯಮಗಳು ಎಲ್ಲರಿಗೂ ಒಂದೇ ಆಗಿರಲಿ
ಹುಡುಗಿಯರಿಗೆ ಸಮಯದ ಮಿತಿ, ಓಡಾಟದ ನಿಯಮ, ಸ್ನೇಹಿತರ ವಿಚಾರದಲ್ಲಿ ಹಲವು ನಿಯಮಗಳನ್ನು ವಿಧಿಸಿ, ಹುಡುಗರಿಗೆ ಮಾತ್ರ ಸಂಪೂರ್ಣ ಸ್ವಾತಂತ್ರ್ಯ ನೀಡುವುದು ಸರಿಯಾದ ಮಾದರಿಯಲ್ಲ.

ಮನೆಯ ನಿಯಮಗಳು ಸಾಧ್ಯವಾದಷ್ಟು ಮಕ್ಕಳ ಸುರಕ್ಷತೆ, ಜವಾಬ್ದಾರಿ ಮತ್ತು ಪರಸ್ಪರ ಗೌರವವನ್ನು ಆಧರಿಸಿರಬೇಕು. ಹುಡುಗನಿಗೂ ತನ್ನ ವರ್ತನೆಗೆ ಮಿತಿ ಮತ್ತು ಹೊಣೆಗಾರಿಕೆ ಇದೆ ಎಂಬುದನ್ನು ಪೋಷಕರು ತಿಳಿಸಬೇಕು.

ಒಬ್ಬ ಹುಡುಗ ತನ್ನ ಮನೆಯಲ್ಲಿರುವ ಅಮ್ಮ ಅಥವಾ ಸಹೋದರಿಗೆ ಯಾವ ಗೌರವ ಕೊಡುತ್ತಾನೋ, ಅದೇ ಗೌರವವನ್ನು ಸಮಾಜದಲ್ಲಿರುವ ಇತರ ಹೆಣ್ಣುಮಕ್ಕಳಿಗೂ ನೀಡಬೇಕು.

ಮಕ್ಕಳ ಮುಂದೆ ಪೋಷಕರ ವರ್ತನೆಯೂ ಪಾಠವೇ
ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸುವಾಗ ಪೋಷಕರು ತಮ್ಮ ವರ್ತನೆಯನ್ನೂ ಗಮನಿಸಬೇಕು. ಅಪ್ಪ-ಅಮ್ಮನ ನಡುವೆ ನಿರಂತರ ಜಗಳ, ಪರಸ್ಪರ ಅವಮಾನ ಅಥವಾ ಮಕ್ಕಳ ಮುಂದೆ ಕೆಟ್ಟ ಅಭ್ಯಾಸಗಳನ್ನು ಪ್ರದರ್ಶಿಸುವ ವಾತಾವರಣ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಮಕ್ಕಳು ಹೇಳುವುದಕ್ಕಿಂತ ನೋಡುವುದನ್ನು ಬೇಗ ಕಲಿಯುತ್ತಾರೆ. ಅಪ್ಪ ಅಮ್ಮನನ್ನು ಗೌರವದಿಂದ ಮಾತನಾಡಿಸಿದರೆ, ಮಗನೂ ಮಹಿಳೆಯರೊಂದಿಗೆ ಗೌರವದಿಂದ ವರ್ತಿಸುವುದನ್ನು ಕಲಿಯುತ್ತಾನೆ. ಮನೆಯ ಕೆಲಸವನ್ನು ಪೋಷಕರು ಪರಸ್ಪರ ಹಂಚಿಕೊಂಡರೆ, ಮಗನಿಗೂ ಜವಾಬ್ದಾರಿ ಹಂಚಿಕೊಳ್ಳುವ ಮನೋಭಾವ ಬರುತ್ತದೆ.

ಮನೆಯ ಸಂಸ್ಕಾರವೇ ಮಗುವಿನ ಮೊದಲ ಪಾಠ
ಒಬ್ಬ ಹುಡುಗ ಹೊರಗೆ ಹೇಗೆ ವರ್ತಿಸುತ್ತಾನೆ ಎಂಬುದರ ಹಿಂದೆ ಅವನು ಬೆಳೆದ ಮನೆಯ ವಾತಾವರಣದ ಪಾತ್ರವೂ ಇರುತ್ತದೆ. ಆದ್ದರಿಂದ ಮಗನಿಗೆ ಸ್ವಾತಂತ್ರ್ಯ ನೀಡುವುದರ ಜೊತೆಗೆ ಜವಾಬ್ದಾರಿಯನ್ನೂ ಕಲಿಸಬೇಕು. ಮನೆಯಲ್ಲೇ ಗೌರವ, ಸಮಾನತೆ, ಪ್ರೀತಿ ಮತ್ತು ಜವಾಬ್ದಾರಿಯ ವಾತಾವರಣ ನಿರ್ಮಿಸಿದರೆ, ಆ ಮಗು ಮುಂದೆ ಸಮಾಜಕ್ಕೂ ಅದೇ ಮೌಲ್ಯಗಳನ್ನು ಕೊಂಡೊಯ್ಯುತ್ತದೆ.

ಒಬ್ಬ ಹುಡುಗನ ಸ್ವಭಾವ ಮತ್ತು ಸಂಗತಿಯೂ ಅವನ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅವನು ಯಾರೊಂದಿಗೆ ಸ್ನೇಹ ಬೆಳೆಸುತ್ತಾನೆ, ದಿನನಿತ್ಯ ಎನು ಮಾಡುತ್ತಾನೆ? ಅವನ ಸ್ನೇಹಿತರ ಸ್ವಭಾವ ಹೇಗಿದೆ, ಇತರರನ್ನು ಹೇಗೆ ಗೌರವಿಸುತ್ತಾನೆ ಎಂಬುದನ್ನು ಪೋಷಕರು ಗಮನಿಸಬೇಕು.

-ಸಾರಿಕಾ ಪುಜಾರಿ