ದಾವಣಗೆರೆ: ಭದ್ರಾ ಮೇಲ್ದಂಡೆ ಯೋಜನೆಗೆ ಭದ್ರಾ ಜಲಾಶಯದಿಂದ ಮೂರು ಟಿಎಂಸಿ ಅಡಿ ನೀರು ಹರಿಸುವುದು ಹಾಗೂ ಗುಟ್ಕಾ ನಿಷೇಧವನ್ನು ವಿರೋಧಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಮಂಗಳವಾರ ದಾವಣಗೆರೆ ಬಂದ್‌ಗೆ ಕರೆ ನೀಡಿದ್ದರೂ, ನಗರದ ಚಿತ್ರಮಂದಿರಗಳಲ್ಲಿ ಬೆಳಗಿನ ಪ್ರದರ್ಶನಕ್ಕೆ ಬಂದ್ ಬಿಸಿ ತಟ್ಟದಿರುವುದು ಕಂಡುಬಂತು.
ಬಂದ್ ಹಿನ್ನೆಲೆಯಲ್ಲಿ ಕೆಲ ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದರೆ, ಸರ್ಕಾರಿ ಶಾಲಾ-ಕಾಲೇಜುಗಳು ಹಾಗೂ ಬಹುತೇಕ ಖಾಸಗಿ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ರಜೆ ಇದ್ದ ಹಿನ್ನೆಲೆಯಲ್ಲಿ ಕೆಲವು ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಿನಿಮಾ ವೀಕ್ಷಣೆಗೆ ಚಿತ್ರಮಂದಿರಗಳತ್ತ ಮುಖ ಮಾಡಿರುವುದು ಕಂಡುಬಂತು.
ನಗರದ ತ್ರಿನೇತ್ರ, ತ್ರಿಶೂಲ್ ಹಾಗೂ ಗೀತಾಂಜಲಿ ಚಿತ್ರಮಂದಿರಗಳಲ್ಲಿ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಪ್ರದರ್ಶನ ಕಾಣುತ್ತಿದ್ದು, ಬೆಳಗಿನ ಪ್ರದರ್ಶನಕ್ಕೆ ಟಿಕೆಟ್ ವಿತರಣೆ ನಡೆಯಿತು. ಬಂದ್‌ಗೆ ಕರೆ ನೀಡಲಾಗಿದ್ದರೂ ತ್ರಿನೇತ್ರ ಹಾಗೂ ತ್ರಿಶೂಲ್ ಚಿತ್ರಮಂದಿರಗಳಲ್ಲಿ ‘ಟಾಕ್ಸಿಸ್’ ವೀಕ್ಷಣೆಗೆ ಪ್ರೇಕ್ಷಕರು ಆಗಮಿಸಿದ್ದರು.
ಇನ್ನು ಬಂದ್ ಹಿನ್ನೆಲೆಯಲ್ಲಿ ನಗರ ಬಸ್ ಸಂಚಾರ ವಿರಳವಾಗಿದ್ದು, ಕೆಲ ಹೋಟೆಲ್‌ಗಳು ಹಾಗೂ ಅಂಗಡಿ-ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು. ನಗರದ ಕೆಲವು ಪ್ರದೇಶಗಳಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಬಂದ್‌ಗೆ ಮನವಿ: ಬಂದ್ ಯಶಸ್ವಿಗೊಳಿಸುವಂತೆ ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಮುಖಂಡರು ಸೋಮವಾರ ಸಂಜೆ ಬೈಕ್ ರ‍್ಯಾಲಿ ನಡೆಸಿ ನಗರದ ವ್ಯಾಪಾರಸ್ಥರು, ಆಟೋ ಚಾಲಕರು, ಬಸ್ ಮಾಲೀಕರು, ಶಾಲಾ-ಕಾಲೇಜುಗಳ ಮುಖ್ಯಸ್ಥರು ಹಾಗೂ ಚಿತ್ರಮಂದಿರಗಳ ಮಾಲೀಕರಿಗೆ ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿದ್ದರು.
ಮಂಗಳವಾರ ಬೆಳಗ್ಗೆಯಿಂದಲೂ ಬಿಜೆಪಿ ಕಾರ್ಯಕರ್ತರು ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ, ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಸ್ವಯಂಪ್ರೇರಿತವಾಗಿ ಬಂದ್‌ಗೆ ಸಹಕರಿಸುವಂತೆ ಮನವಿ ಮಾಡುತ್ತಿರುವುದು ಕಂಡುಬಂತು. ಇದರ ನಡುವೆಯೂ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಮುಂದುವರಿದಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಿನಿಮಾ ವೀಕ್ಷಣೆಗೆ ತೆರಳಿರುವುದು ಗಮನ ಸೆಳೆಯಿತು.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.




















