ಮುಂಬೈ: ಹಿರಿಯ ಸಾಮಾಜಿಕ ಕಾರ್ಯಕರ್ತ ಹಾಗೂ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಮುಂಬೈನ ಬಾಂಬೆ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಗಿದೆ. ಅವರಿಗೆ ತೀವ್ರ ವೈರಲ್ ಸೋಂಕು ಹಾಗೂ ನಿರ್ಜಲೀಕರಣದ ಸಮಸ್ಯೆ ಕಾಣಿಸಿಕೊಂಡಿದ್ದು, ಕಿಡ್ನಿ ಸಂಬಂಧಿತ ತೊಂದರೆಯೂ ಇದೆ ಎಂದು ವರದಿಯಾಗಿದೆ.
ಮಹಾರಾಷ್ಟ್ರದ ರಾಲೇಗಣ ಸಿದ್ಧಿ ಗ್ರಾಮದ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಣ್ಣಾ ಹಜಾರೆ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮುಂಬೈಗೆ ಸ್ಥಳಾಂತರಿಸಲಾಗಿದೆ. ಅವರನ್ನು ಕಾರ್ಡಿಯಾಕ್ ಆಂಬ್ಯುಲೆನ್ಸ್ ಮೂಲಕ ಮುಂಬೈನ ಬಾಂಬೆ ಆಸ್ಪತ್ರೆಗೆ ಕರೆತರಲಾಗಿದೆ ಎಂದು ವರದಿಗಳು ತಿಳಿಸಿವೆ.
ಬಾಂಬೆ ಆಸ್ಪತ್ರೆಯ ವೈದ್ಯ ಗೌತಮ್ ಭನ್ಸಾಲಿ ಅವರ ಮೇಲ್ವಿಚಾರಣೆಯಲ್ಲಿ ಅಣ್ಣಾ ಹಜಾರೆ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಹಲವು ರೋಗನಿರ್ಣಯ ಪರೀಕ್ಷೆಗಳನ್ನು ನಡೆಸುತ್ತಿದ್ದು, ಪರೀಕ್ಷಾ ವರದಿಗಳ ಆಧಾರದ ಮೇಲೆ ಮುಂದಿನ ಚಿಕಿತ್ಸೆಯನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.
ಇತ್ತೀಚಿನ ವೈದ್ಯಕೀಯ ಮಾಹಿತಿ ಪ್ರಕಾರ, ಅಣ್ಣಾ ಹಜಾರೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯ ಗೌತಮ್ ಭನ್ಸಾಲಿ ತಿಳಿಸಿದ್ದಾರೆ. ಸದ್ಯ ಅವರು ICUನಲ್ಲಿ ವೈದ್ಯರ ನಿಗಾದಲ್ಲಿದ್ದು, ಹೆಚ್ಚಿನ ಆರೋಗ್ಯ ವಿವರಗಳಿಗಾಗಿ ಪರೀಕ್ಷಾ ವರದಿಗಳನ್ನು ನಿರೀಕ್ಷಿಸಲಾಗುತ್ತಿದೆ.
ಅಣ್ಣಾ ಹಜಾರೆ ಅವರು 2011ರ ಭ್ರಷ್ಟಾಚಾರ ವಿರೋಧಿ ಚಳವಳಿ ಮೂಲಕ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದ್ದರು. ಇತ್ತೀಚಿನ ದಿನಗಳಲ್ಲೂ ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ NEET ಪರೀಕ್ಷೆಗೆ ಸಂಬಂಧಿಸಿದ ವಿಚಾರಗಳ ಕುರಿತು ಅವರು ಪ್ರತಿಕ್ರಿಯಿಸಿದ್ದರು. ಅವರ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ತಿಳಿದು ಬೆಂಬಲಿಗರು ಆತಂಕ ವ್ಯಕ್ತಪಡಿಸಿದ್ದು, ಶೀಘ್ರ ಚೇತರಿಕೆಗೆ ಹಾರೈಸುತ್ತಿದ್ದಾರೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.




















