ಬಿಡದಿ ಟೌನ್‌ಶಿಪ್‌ಗೆ ಮರುಜೀವ; ವಿಶ್ವದರ್ಜೆಯ ಸೌಲಭ್ಯಗಳೊಂದಿಗೆ AI ಸಿಟಿ ನಿರ್ಮಾಣ – ರೈತರ ಹಿತರಕ್ಷಣೆ ನಮ್ಮ ಪ್ರಮುಖ ಆದ್ಯತೆ – ಡಿ.ಕೆ. ಶಿವಕುಮಾರ್
ಬೆಂಗಳೂರು: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಡದಿ ಟೌನ್‌ಶಿಪ್ ಯೋಜನೆಗೆ ಇದೀಗ ಮರುಜೀವ ನೀಡಲಾಗುತ್ತಿದ್ದು, ಬೆಂಗಳೂರು ದಕ್ಷಿಣ ಜಿಲ್ಲೆಯ ಭವಿಷ್ಯದ ಅಭಿವೃದ್ಧಿಗೆ ಹೊಸ ರೂಪ ನೀಡುವ ಮಹತ್ವಾಕಾಂಕ್ಷೆಯ ಯೋಜನೆಯಾಗಿ ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳುವ ಸಂದರ್ಭದಲ್ಲಿ ರೈತರ ಹಿತರಕ್ಷಣೆಗೆ ಸರ್ಕಾರ ಅತ್ಯಂತ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (GBDA) ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ಈ ಯೋಜನೆಯನ್ನು ವಿಶ್ವದರ್ಜೆಯ ಮೂಲಸೌಕರ್ಯ ಹೊಂದಿರುವ ಅತ್ಯಾಧುನಿಕ ಎಐ ಸಿಟಿಯಾಗಿ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ. ಉತ್ತಮ ಗುಣಮಟ್ಟದ ರಸ್ತೆಗಳು, ಮೆಟ್ರೋ ಸಂಪರ್ಕ, ಅತ್ಯಾಧುನಿಕ ಕ್ರೀಡಾಂಗಣ, ಉದ್ಯಾನವನಗಳು ಹಾಗೂ ಸುಸಜ್ಜಿತ ವಸತಿ ಪ್ರದೇಶಗಳನ್ನು ಒಳಗೊಂಡ ಸಮಗ್ರ ನಗರಾಭಿವೃದ್ಧಿ ಮಾದರಿಯನ್ನು ಇಲ್ಲಿ ರೂಪಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಸರ್ಕಾರದ ಅಭಿವೃದ್ಧಿ ದೃಷ್ಟಿಕೋನದ ಭಾಗವಾಗಿ ಬಿಡದಿ ಟೌನ್‌ಶಿಪ್ ಯೋಜನೆಗೆ ವೇಗ ನೀಡಲಾಗುತ್ತಿದೆ. ಯೋಜನೆ ಪೂರ್ಣಗೊಂಡ ಬಳಿಕ ಬೆಂಗಳೂರು ದಕ್ಷಿಣ ಭಾಗದ ನಗರೀಕರಣ, ಸಾರಿಗೆ, ವಸತಿ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಲಿದೆ ಎಂಬ ನಿರೀಕ್ಷೆ ಮೂಡಿದೆ.
ರೈತರ ಹಿತರಕ್ಷಣೆಗೆ ಆದ್ಯತೆ : ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳುವ ಸಂದರ್ಭದಲ್ಲಿ ರೈತರ ಹಿತರಕ್ಷಣೆಗೆ ಸರ್ಕಾರ ಅತ್ಯಂತ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರತಿ ಎಕರೆಗೆ ಕೇವಲ ₹25 ಲಕ್ಷ ಪರಿಹಾರ ನಿಗದಿಪಡಿಸಲಾಗಿತ್ತು. ಆದರೆ ಪ್ರಸ್ತುತ ಸರ್ಕಾರ ರೈತರಿಗೆ ಪ್ರತಿ ಎಕರೆಗೆ ₹3 ಕೋಟಿಗೂ ಹೆಚ್ಚು ಪರಿಹಾರ ನೀಡಲು ತೀರ್ಮಾನಿಸಿದೆ ಎಂದು ಅವರು ತಿಳಿಸಿದ್ದಾರೆ.
ರೈತರಿಗೆ ಕೇವಲ ಹಣದ ರೂಪದಲ್ಲಿ ಪರಿಹಾರ ನೀಡುವುದಕ್ಕೆ ಬದಲಾಗಿ, ಅಭಿವೃದ್ಧಿಪಡಿಸಿದ ಜಾಗ ಪಡೆಯಲು ಆಸಕ್ತಿ ಇರುವವರಿಗೆ ಶೇ.50ರಷ್ಟು ಅಭಿವೃದ್ಧಿಪಡಿಸಿದ ಜಾಗ ನೀಡುವ ಅವಕಾಶವನ್ನೂ ಕಲ್ಪಿಸಲಾಗುವುದು ಎಂದು ಅವರು ಹೇಳಿದ್ದಾರೆ. ಇದರಿಂದ ಭೂಮಿ ಕಳೆದುಕೊಳ್ಳುವ ರೈತರಿಗೆ ಯೋಜನೆಯಿಂದ ಉಂಟಾಗುವ ಭವಿಷ್ಯದ ಆರ್ಥಿಕ ಬೆಳವಣಿಗೆಯಲ್ಲೂ ಪಾಲುದಾರರಾಗುವ ಅವಕಾಶ ಸಿಗಲಿದೆ ಎಂಬ ಸರ್ಕಾರದ ಆಶಯವಾಗಿದೆ.
ಭೂಸ್ವಾಧೀನ ಸಂಪೂರ್ಣ ಐಚ್ಛಿಕ : ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ರೈತರಲ್ಲಿ ಯಾವುದೇ ಆತಂಕ ಇರಬಾರದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಭೂಸ್ವಾಧೀನ ಪ್ರಕ್ರಿಯೆ ಸಂಪೂರ್ಣವಾಗಿ ಐಚ್ಛಿಕವಾಗಿರಲಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಯೋಜನೆಗೆ ತಮ್ಮ ಜಮೀನು ನೀಡಲು ಇಷ್ಟವಿಲ್ಲದ ರೈತರ ಮೇಲೆ ಯಾವುದೇ ರೀತಿಯ ಒತ್ತಡ ಹೇರಲಾಗುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ. ರೈತರ ಒಪ್ಪಿಗೆ ಮತ್ತು ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡೇ ಯೋಜನೆಯನ್ನು ಮುಂದುವರಿಸಲಾಗುವುದು ಎಂಬ ಸಂದೇಶವನ್ನು ಸರ್ಕಾರ ನೀಡಿದೆ.
ಈ ಅಂಶವು ಯೋಜನೆಗೆ ಸಂಬಂಧಿಸಿದಂತೆ ರೈತರಲ್ಲಿ ಉಂಟಾಗಬಹುದಾದ ಭೂಸ್ವಾಧೀನದ ಆತಂಕವನ್ನು ನಿವಾರಿಸುವ ಪ್ರಮುಖ ಪ್ರಯತ್ನವಾಗಿದೆ.
- ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ವಲಯವಾರು ವೇಳಾಪಟ್ಟಿ ಪ್ರಕಟ : ಸೆ 28 ರಿಂದ ದೈಹಿಕ ಪರೀಕ್ಷೆ
- ತಪ್ಪು ಮಾಹಿತಿ ನೀಡಿ ವಿಮೆ ಮಾರಾಟಕ್ಕೆ ಬ್ರೇಕ್: IRDAIಯಿಂದ ಹೊಸ ನಿಯಮಗಳ ಪ್ರಸ್ತಾವನೆ
- ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ರಾಹುಲ್ ಗಾಂಧಿ ಪಟ್ಟು: ‘ದೇಶದ್ರೋಹಿ’ ಹೇಳಿಕೆಗೆ ಬಿಜೆಪಿಯಿಂದ ತಿರುಗೇಟು!
- ಉತ್ಪಾದನಾ ಭಾರತದ ಪಯಣಕ್ಕೆ 12 ವರ್ಷ: ‘ಮೇಕ್ ಇನ್ ಇಂಡಿಯಾ’ದ ಮುಂದಿನ ಗುರಿ ಏನು?
- ಕರ್ನಾಟಕದ ವೈವಿಧ್ಯತೆಯ ಸಂಭ್ರಮಕ್ಕೆ ಸಜ್ಜಾದ ಬೆಂಗಳೂರು: ಸೆ.26ರಿಂದ ‘ಕರ್ನಾಟಕ ಪರ್ವ’





















