SK Home Ad
Home ಸುದ್ದಿ ದೇಶ ವಿವಾದಾತ್ಮಕ ಹೇಳಿಕೆ ಪ್ರಕರಣ: ಉದಯನಿಧಿ ಸ್ಟಾಲಿನ್ ಪೊಲೀಸ್ ವಶಕ್ಕೆ

ವಿವಾದಾತ್ಮಕ ಹೇಳಿಕೆ ಪ್ರಕರಣ: ಉದಯನಿಧಿ ಸ್ಟಾಲಿನ್ ಪೊಲೀಸ್ ವಶಕ್ಕೆ

0
140

ತ್ರಿಷಾ ಕುರಿತು ವಿವಾದಾತ್ಮಕ ಹೇಳಿಕೆ ಆರೋಪ; ಉದಯನಿಧಿ ಸ್ಟಾಲಿನ್ ಪೊಲೀಸ್ ವಶಕ್ಕೆ, ತಮಿಳುನಾಡಿನಲ್ಲಿ ರಾಜಕೀಯ ಸಂಚಲನ

ಚೆನ್ನೈ: ತಮಿಳುನಾಡಿನ ಮಾಜಿ ಉಪಮುಖ್ಯಮಂತ್ರಿ ಹಾಗೂ ಡಿಎಂಕೆ (DMK) ಪಕ್ಷದ ಹಿರಿಯ ನಾಯಕ, ಪ್ರಸ್ತುತ ವಿರೋಧಪಕ್ಷದ ನಾಯಕರಾಗಿರುವ ಉದಯನಿಧಿ ಸ್ಟಾಲಿನ್ ಅವರನ್ನು ತಂಜಾವೂರು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕಾವೇರಿ ನೀರು ಹಂಚಿಕೆ ವಿಚಾರವಾಗಿ ನಡೆದ ಪ್ರತಿಭಟನಾ ಸಭೆಯಲ್ಲಿ ನಟಿ ತ್ರಿಷಾ ಕೃಷ್ಣನ್ ಅವರ ಕುರಿತು ಆಕ್ಷೇಪಾರ್ಹ ಹಾಗೂ ದ್ವಂದ್ವಾರ್ಥದ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಈ ಸಂಬಂಧ ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳಾಗ ವೆಟ್ರಿ ಕಳಗಂ (TVK) ಪಕ್ಷ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಮಹಿಳೆಯರ ಘನತೆಗೆ ಧಕ್ಕೆ ತರುವ ರೀತಿಯ ಹೇಳಿಕೆ ನೀಡಲಾಗಿದೆ ಎಂದು ಆರೋಪಿಸಿದೆ.

ಏನಿದು ವಿವಾದ? : ತಂಜಾವೂರಿನಲ್ಲಿ ಕಾವೇರಿ ನೀರಿನ ಹಂಚಿಕೆ ಸಮಸ್ಯೆ ಹಾಗೂ ರೈತರ ಸಂಕಷ್ಟದ ಕುರಿತು ಡಿಎಂಕೆ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಉದಯನಿಧಿ ಸ್ಟಾಲಿನ್ ಭಾಷಣ ಮಾಡುತ್ತಿದ್ದರು. ಈ ವೇಳೆ ಅವರು ಮುಖ್ಯಮಂತ್ರಿ ವಿಜಯ್ ಅವರ ವಿರುದ್ಧ ಟೀಕೆ ನಡೆಸುತ್ತಿದ್ದಾಗ, ಸಭೆಯಲ್ಲಿದ್ದ ಕೆಲವರು ನಟಿ ತ್ರಿಷಾ ಕೃಷ್ಣನ್ ಅವರ ಹೆಸರನ್ನು ಕೂಗಲು ಆರಂಭಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಉದಯನಿಧಿ ಸ್ಟಾಲಿನ್, “ನೀರು ಎಲ್ಲಿಗೆ ತಲುಪಬೇಕೋ ಅಲ್ಲಿಗೆ ತಲುಪಬೇಕು. ನಾನು ಹೇಳಿದ್ದು ಕಾವೇರಿ ನೀರನ್ನು” ಎಂದು ನಗುತ್ತಾ ಹೇಳಿದ್ದು, ಈ ಹೇಳಿಕೆ ದ್ವಂದ್ವಾರ್ಥ ಹೊಂದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಯಿತು.

ಈ ಘಟನೆಯ ವಿಡಿಯೊ ವೈರಲ್ ಆದ ಬಳಿಕ ಹಲವು ರಾಜಕೀಯ ಪಕ್ಷಗಳು ಹಾಗೂ ಸಾಮಾಜಿಕ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದವು.

ಟಿವಿಕೆ ಪಕ್ಷದಿಂದ ದೂರು : ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಮಹಿಳಾ ಘಟಕ ಹಾಗೂ ಪಕ್ಷದ ಮುಖಂಡರು ತಂಜಾವೂರು ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ. ಸಾರ್ವಜನಿಕ ವೇದಿಕೆಯಲ್ಲಿ ಮಹಿಳೆಯರ ಬಗ್ಗೆ ಇಂತಹ ಹೇಳಿಕೆ ನೀಡುವುದು ಜವಾಬ್ದಾರಿಯುತ ನಾಯಕನಿಗೆ ಶೋಭೆಯಲ್ಲ ಎಂದು ಅವರು ಆರೋಪಿಸಿದ್ದಾರೆ.

ಅದೇ ವೇಳೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೂ (NCW) ದೂರು ಸಲ್ಲಿಸಲಾಗಿದ್ದು, ಪ್ರಕರಣದ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

ಪೊಲೀಸ್ ವಶಕ್ಕೆ ಉದಯನಿಧಿ : ದೂರು ದಾಖಲಾಗಿದ ಬಳಿಕ ಟಿವಿಕೆ ಕಾರ್ಯಕರ್ತರು ಪ್ರತಿಭಟನೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಚೆನ್ನೈನ ನೀಲಂಗರೈನಲ್ಲಿರುವ ಉದಯನಿಧಿ ಸ್ಟಾಲಿನ್ ನಿವಾಸದ ಬಳಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಯಿತು. ನಂತರ ತಂಜಾವೂರು ಪೊಲೀಸರು ಉದಯನಿಧಿ ಸ್ಟಾಲಿನ್ ಅವರನ್ನು ವಶಕ್ಕೆ ಪಡೆದು ವಿಚಾರಣೆಗಾಗಿ ಕರೆದೊಯ್ದಿದ್ದಾರೆ. ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆ ಕುರಿತು ಪೊಲೀಸರು ಅಧಿಕೃತ ಮಾಹಿತಿ ನೀಡುವ ನಿರೀಕ್ಷೆಯಿದೆ.

ರಾಜಕೀಯ ವಾಗ್ವಾದ ತೀವ್ರ : ಈ ಘಟನೆಯ ಬಳಿಕ ತಮಿಳುನಾಡಿನ ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿವೆ. ತಮಿಳುನಾಡು ಬಿಜೆಪಿ ಸೇರಿದಂತೆ ಹಲವು ಪಕ್ಷಗಳು ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ, ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿವೆ.

ಇನ್ನೊಂದೆಡೆ, ಡಿಎಂಕೆ ನಾಯಕರು ಉದಯನಿಧಿ ಅವರ ಹೇಳಿಕೆಯನ್ನು ಸಂದರ್ಭದಿಂದ ಹೊರತೆಗೆದು ರಾಜಕೀಯವಾಗಿ ಬಳಸಲಾಗುತ್ತಿದೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

ಈ ಘಟನೆ ಮುಂದಿನ ದಿನಗಳಲ್ಲಿ ತಮಿಳುನಾಡಿನ ರಾಜಕೀಯ ಚರ್ಚೆಯ ಪ್ರಮುಖ ವಿಷಯವಾಗುವ ಸಾಧ್ಯತೆ ಇದೆ.