SK Home Ad
Home ನಮ್ಮ ಜಿಲ್ಲೆ ಮೈಸೂರು ಕಾವೇರಿ ವಿಚಾರ ರಾಜಕೀಯದ ವಿಷಯವಾಗಬಾರದು: D. K.ಶಿವಕುಮಾರ

ಕಾವೇರಿ ವಿಚಾರ ರಾಜಕೀಯದ ವಿಷಯವಾಗಬಾರದು: D. K.ಶಿವಕುಮಾರ

0
64

ಬಿಜೆಪಿ ಹೋರಾಟದ ಹೆಸರಿನಲ್ಲಿ ಪ್ಯಾಂಟ್ ಅಂಗಿ ಹರಿದಿದೆ : ನೀರು ಬಿಡಲ್ಲ ಎಂದು ಹೇಳಲಾಗದು – ಡಿ.ಕೆ. ಶಿವಕುಮಾರ್

ಸಂ.ಕ. ಸಮಾಚಾರ ಮೈಸೂರು: ಕಾವೇರಿ ನೀರು ಬಿಡುಗಡೆ, ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಹಾಗೂ ಮೇಕೆದಾಟು ಯೋಜನೆ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲಾಶಯಗಳು ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ನೀರು ಬಿಡುಗಡೆ ಕುರಿತು ಸರ್ವಪಕ್ಷ ಸಭೆ ಕರೆದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಗಳ ಬಗ್ಗೆ ವ್ಯಂಗ್ಯವಾಡಿದ ಡಿ.ಕೆ. ಶಿವಕುಮಾರ್, “ಬಿಜೆಪಿ ನಾಯಕರು ಹೋರಾಟದ ಹೆಸರಿನಲ್ಲಿ ನನ್ನ ಪ್ಯಾಂಟ್-ಅಂಗಿ ಹರಿಯುತ್ತಿದ್ದಾರೆ. ಕರ್ನಾಟಕದ ಸಂಸದರು ರಾಜ್ಯದ ಪರವಾಗಿ ಸಂಸತ್‌ನಲ್ಲಿ ಧ್ವನಿ ಎತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈಗಲೇ ಡ್ಯಾಂಗೆ ಬಾಗಿನ ಬಿಡುವ ಮಾತು ಹೇಗೆ ಹೇಳಲಿ?” ಎಂದು ಪ್ರಶ್ನಿಸಿದರು.

ಕಾವೇರಿ ವಿಚಾರವು ಕೇವಲ ರಾಜಕೀಯದ ವಿಷಯವಾಗಬಾರದು ಎಂದು ಹೇಳಿದ ಅವರು, ಹೋರಾಟಕ್ಕೆ ಸ್ಪಷ್ಟವಾದ ಹಿನ್ನೆಲೆ ಮತ್ತು ಉದ್ದೇಶ ಇರಬೇಕು ಎಂದರು. “ನಾವೆಲ್ಲ ಒಂದೇ ದೇಶದವರು. ಕರ್ನಾಟಕಕ್ಕೂ ಅನ್ಯಾಯ ಆಗಬಾರದು, ತಮಿಳುನಾಡಿಗೂ ಅನ್ಯಾಯ ಆಗಬಾರದು. ಎರಡೂ ರಾಜ್ಯಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕು,” ಎಂದು ಹೇಳಿದರು.

ರಾಜ್ಯದ ಜಲಾಶಯಗಳು ವೇಗವಾಗಿ ಭರ್ತಿಯಾಗುತ್ತಿರುವುದರಿಂದ ನೀರು ಬಿಡುಗಡೆ ಮಾಡದೆ ಇರುವುದು ತಾಂತ್ರಿಕವಾಗಿ ಸಾಧ್ಯವಿಲ್ಲ ಎಂದು ಡಿಕೆಶಿ ಸ್ಪಷ್ಟಪಡಿಸಿದರು. “ನೀರು ಬಿಡುವುದಿಲ್ಲ ಎಂದು ಹೇಳಿದರೆ ಅದನ್ನು ಶಾಶ್ವತವಾಗಿ ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿಗೆ ಗೌರವ ನೀಡಬೇಕು. ಅದೇ ವೇಳೆ ರಾಜ್ಯದ ರೈತರ ಹಿತವನ್ನೂ ಕಾಪಾಡುತ್ತೇವೆ,” ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಬಂದ್‌ಗೆ ಕರೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರತಿಭಟನೆ ನಡೆಸುವುದನ್ನು ಸರ್ಕಾರ ವಿರೋಧಿಸುವುದಿಲ್ಲ. ಆದರೆ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿಯಾಗಬಾರದು ಹಾಗೂ ಜನಜೀವನ ಅಸ್ತವ್ಯಸ್ತವಾಗಬಾರದು ಎಂದು ಮನವಿ ಮಾಡಿದರು. “ಹೋರಾಟ ಮಾಧ್ಯಮದ ಪ್ರಚಾರಕ್ಕೆ ಮಾತ್ರ ಸೀಮಿತವಾಗಬಾರದು. ದಯವಿಟ್ಟು ರಾಜ್ಯ ಬಂದ್ ಮಾಡಬೇಡಿ,” ಎಂದು ಜನರಿಗೆ ಮನವಿ ಮಾಡಿದರು.

ಮೇಕೆದಾಟು ಯೋಜನೆ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, ಕೇಂದ್ರ ಸರ್ಕಾರವೇ ಈ ಯೋಜನೆಗೆ ಸಂಬಂಧಿಸಿದ ಕಾನೂನು ಹಾಗೂ ದಾಖಲೆಗಳ ಬಗ್ಗೆ ಸ್ಪಷ್ಟನೆ ನೀಡಿದೆ ಎಂದು ಹೇಳಿದರು. ಈ ಹಿಂದೆ ತಮಿಳುನಾಡು ಮೇಕೆದಾಟು ಯೋಜನೆಗೆ ಅನುಮತಿ ನೀಡಿದ್ದ ದಾಖಲೆಗಳಿವೆ ಎಂದು ಹೇಳಿದ ಅವರು, ಈ ವಿಚಾರದಲ್ಲೂ ನ್ಯಾಯಾಲಯದ ತೀರ್ಪನ್ನು ಗೌರವಿಸುವುದಾಗಿ ತಿಳಿಸಿದರು.

ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರ ಕರ್ನಾಟಕ ಪ್ರವಾಸ ರದ್ದಾಗಿರುವ ವಿಚಾರಕ್ಕೂ ಪ್ರತಿಕ್ರಿಯಿಸಿದ ಅವರು, ಪ್ರಸ್ತುತ ಪರಿಸ್ಥಿತಿ ಸೂಕ್ತವಾಗಿಲ್ಲದ ಕಾರಣ ಭೇಟಿ ಮುಂದೂಡಲಾಗಿದೆ ಎಂದರು. “ಪರಿಸ್ಥಿತಿ ಶಾಂತವಾದ ಬಳಿಕ ಎರಡು ರಾಜ್ಯಗಳ ನಡುವೆ ಶಾಂತ ವಾತಾವರಣದಲ್ಲಿ ಚರ್ಚೆ ನಡೆದರೆ ಉತ್ತಮ ಫಲಿತಾಂಶ ಸಿಗಲಿದೆ,” ಎಂದು ಅಭಿಪ್ರಾಯಪಟ್ಟರು.

ಕೊನೆಗೆ ಜಲಾಶಯಗಳ ಬಳಿಯಲ್ಲಿ ಅಪಾಯಕಾರಿ ಪ್ರತಿಭಟನೆ ನಡೆಸದಂತೆ ಸಾರ್ವಜನಿಕರಿಗೆ ಮನವಿ ಮಾಡಿದ ಡಿ.ಕೆ. ಶಿವಕುಮಾರ್, “ಜಲಾಶಯಗಳು ತುಂಬಿದರೆ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡಲೇಬೇಕು. ‘ನೀರು ಬಿಡಬೇಡಿ’ ಎಂದು ನದಿಗೆ ಇಳಿಯುವುದು ಅಪಾಯಕಾರಿ. ಜೀವ ಅಮೂಲ್ಯವಾದದ್ದು. ಯಾರೂ ಇಂತಹ ಸಾಹಸಕ್ಕೆ ಮುಂದಾಗಬೇಡಿ,” ಎಂದು ಎಚ್ಚರಿಕೆ ನೀಡಿದರು.