ಉತ್ತರ ಕನ್ನಡ: ಯಕ್ಷರಂಗದ ಹಾಸ್ಯ ಚಕ್ರವರ್ತಿ ಶ್ರೀಧರ ಭಟ್ ಕಾಸರಕೋಡ (52) ಅವರು ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ ನಿಧನ ಹೊಂದಿದರು. ಅವರು ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಗುಂಡಬಾಳ ಮೇಳದಲ್ಲಿ ಆರಂಭಿಸಿ, ಕೆರೆಮನೆ ಶ್ರೀಮಯ ಕಲಾಕೇಂದ್ರದಲ್ಲಿ ಯಕ್ಷಾಭ್ಯಾಸಗೈದರು. ಮೇರುಕಲಾವಿದ ಕೆರೆಮನೆ ಶಂಭು ಹೆಗಡೆ ಅವರ ಮಾರ್ಗದರ್ಶನದಲ್ಲಿ ಹೆರಂಜಾಲ ಅವರ ಶಿಷ್ಯರಾಗಿ ಶಾಸ್ತ್ರೋಕ್ತವಾಗಿ ಕಲಿತು, ನಂತರ ಮಂದರ್ತಿ, ಸಾಲಿಗ್ರಾಮ, ಜಲವಳ್ಳಿ ನೇತೃತ್ವದ ಕಲಾದರ ಯಕ್ಷ ಮಂಡಳಿ ಹಾಗೂ ಚಿಟ್ಟಾಣಿ ಅವರ ನೇತೃತ್ವದ ತಂಡಗಳಲ್ಲಿ ಹಾಸ್ಯ ಕಲಾವಿದರಾಗಿ ಸುದೀರ್ಘಕಾಲ ದುಡಿದಿದ್ದರು. ಸಹಜ ಹಾಸ್ಯದಿಂದ ಜನರನ್ನು ನಗೆಯಲ್ಲಿ ತೇಲಿಸುತ್ತಿದ್ದ ಅವರ ಹಾಸ್ಯ ಪ್ರಜ್ಞೆ, ಸಮಯ ಪ್ರಜ್ಞೆ, ಸಾಹಿತ್ಯ, ಪುರಾಣ ಪ್ರಸಂಗಗಳ ಓದು ಮತ್ತು ಭಾಷೆಯ ಸಮೀಕರಣದಿಂದಾಗಿ ಅಪ್ರತಿಮ ಕಲಾವಿದನಾಗಿ ಜನಮನ್ನಣೆ ಪಡೆದಿದ್ದರು.
ರಾಜಾ ರುದ್ರಕೋಪದ ಅಜ್ಜಿ, ಕೀಚಕ ವಧೆಯ ವಿಜಯ, ಕೃಷ್ಣಾರ್ಜುನ ಕಾಳಗದ ಧಾರುಕ, ಭಸ್ಮಾಸುರ ಮೋಹಿನಿಯ ಬ್ರಾಹ್ಮಣ ಮೊದಲಾದ ಹಾಸ್ಯ ಪಾತ್ರಗಳಲ್ಲಿ ಅಮೋಘ ಅಭಿನಯ ಪ್ರದರ್ಶಿಸಿದ್ದರು. ಹಾಸ್ಯಕಲಾವಿದರಾಗಿ ಅವರು ರಂಗಸ್ಥಳಕ್ಕೆ ಬರುತ್ತಿದ್ದಂತೆಯೇ ಪ್ರೇಕ್ಷಕರಿಂದ ಚಪ್ಪಾಳೆಯ ಸುರಿಮಳೆಯಾಗುತ್ತಿತ್ತು. ಮೂಲತಃ ಕಾಸರಕೋಡನವರಾಗಿದ್ದರೂ, ಈಗ ಸಾಲ್ಕೋಡ್ ಗ್ರಾಮದ ಮುಲ್ಲೆಮಕ್ಕಿಯಲ್ಲಿ ತೋಟ ಮಾಡಿ ಅಲ್ಲಿಯೇ ವಾಸವಾಗಿದ್ದರು.





















