SK Home Ad
Home ಸಿನಿ ಮಿಲ್ಸ್ ಭಾರತದ ಟಾಪ್ ಟ್ರೆಂಡಿಂಗ್‌ಗೆ ಕನ್ನಡದ ‘ಅಶೋಕ’: ಖುಷಿ ಹಂಚಿಕೊಂಡ ಸತೀಶ್ ನೀನಾಸಂ

ಭಾರತದ ಟಾಪ್ ಟ್ರೆಂಡಿಂಗ್‌ಗೆ ಕನ್ನಡದ ‘ಅಶೋಕ’: ಖುಷಿ ಹಂಚಿಕೊಂಡ ಸತೀಶ್ ನೀನಾಸಂ

0
57

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ನಿರ್ಮಾಪಕ ಹಾಗೂ ಗಾಯಕ ಸತೀಶ್ ನೀನಾಸಂ ಅಭಿನಯದ ಬಹುನಿರೀಕ್ಷಿತ ”ದಿ ರೈಸ್ ಆಫ್ ಅಶೋಕ” ಚಿತ್ರದ ಹಿಂದಿ ಅವತರಣಿಕೆ ಜಿಯೋಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾದ ಬಳಿಕ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಚಿತ್ರದ ಹಿಂದಿ ಆವೃತ್ತಿ ಭಾರತದಲ್ಲಿ ಜಿಯೋಹಾಟ್‌ಸ್ಟಾರ್ ಟ್ರೆಂಡಿಂಗ್ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಸತೀಶ್ ನೀನಾಸಂ, ಇದು ತಮ್ಮ ಚಿತ್ರತಂಡದ ಶ್ರಮಕ್ಕೆ ದೊರೆತ ದೊಡ್ಡ ಗೌರವ ಎಂದು ಹೇಳಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ದಿ ರೈಸ್ ಆಫ್ ಅಶೋಕ’ ಹಿಂದಿಯ ಅವತರಣಿಕೆ ಭಾರತದ ಟ್ರೆಂಡಿಂಗ್‌ನಲ್ಲಿ ನಂಬರ್ 7 (ಜಿಯೋಹಾಟ್‌ಸ್ಟಾರ್). ತುಂಬಾ ಶ್ರಮ, ಶ್ರದ್ಧೆಯೊಂದಿಗೆ ಮಾಡಿದ ಚಿತ್ರ. ಇದೊಂದು ಸಾರ್ಥಕ ಕ್ಷಣ. ನಮ್ಮ ಜೊತೆ ನಿಂತ ಎಲ್ಲರಿಗೂ ಧನ್ಯವಾದ” ಎಂದು ಬರೆದು ಅಭಿಮಾನಿಗಳು ಹಾಗೂ ಚಿತ್ರತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಕನ್ನಡದಲ್ಲಿ ಈಗಾಗಲೇ ಗಮನ ಸೆಳೆದಿದ್ದ ‘ದಿ ರೈಸ್ ಆಫ್ ಅಶೋಕ’ ಚಿತ್ರ ಇದೀಗ ಹಿಂದಿ ಭಾಷೆಯಲ್ಲೂ ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಿರುವುದು ಚಿತ್ರತಂಡಕ್ಕೆ ಹೊಸ ಉತ್ಸಾಹ ತುಂಬಿದೆ. ಡಿಜಿಟಲ್ ವೇದಿಕೆಗಳಲ್ಲಿ ಕನ್ನಡ ಚಿತ್ರಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ನಡುವೆ ‘ಅಶೋಕ’ ಚಿತ್ರದ ಹಿಂದಿ ಆವೃತ್ತಿಯ ಸಾಧನೆ ಗಮನ ಸೆಳೆಯುತ್ತಿದೆ.

ಜಿಯೋಹಾಟ್‌ಸ್ಟಾರ್ ಟ್ರೆಂಡಿಂಗ್ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನಗಳಲ್ಲಿ ಕಾಣಿಸಿಕೊಳ್ಳುವುದು ಯಾವುದೇ ಚಿತ್ರದ ಜನಪ್ರಿಯತೆಗೆ ಪ್ರಮುಖ ಸೂಚಕವಾಗಿದ್ದು, ವಿವಿಧ ಭಾಷೆಗಳ ಚಿತ್ರಗಳ ನಡುವೆ ‘ದಿ ರೈಸ್ ಆಫ್ ಅಶೋಕ’ ಹಿಂದಿ ಅವತರಣಿಕೆ 7ನೇ ಸ್ಥಾನಕ್ಕೇರಿರುವುದು ಕನ್ನಡ ಸಿನಿಮಾಗೆ ಮತ್ತೊಂದು ಹೆಮ್ಮೆಯ ವಿಚಾರವಾಗಿದೆ.

ಸತೀಶ್ ನೀನಾಸಂ ತಮ್ಮ ಅಭಿನಯದ ಜೊತೆಗೆ ನಿರ್ಮಾಪಕ ಹಾಗೂ ಗಾಯಕನಾಗಿಯೂ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಗುರುತಿಸಿಕೊಂಡಿದ್ದಾರೆ. ವಿಭಿನ್ನ ಕಥಾಹಂದರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಅವರು, ‘ದಿ ರೈಸ್ ಆಫ್ ಅಶೋಕ’ ಚಿತ್ರದ ಮೂಲಕ ಮತ್ತೊಮ್ಮೆ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಚಿತ್ರದ ಹಿಂದಿ ಅವತರಣಿಕೆಗೆ ದೇಶದ ವಿವಿಧ ಭಾಗಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರೇಕ್ಷಕರನ್ನು ತಲುಪುವ ನಿರೀಕ್ಷೆಯನ್ನು ಚಿತ್ರತಂಡ ಹೊಂದಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಅಭಿಮಾನಿಗಳು ಸತೀಶ್ ನೀನಾಸಂ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದು, ಚಿತ್ರದ ಯಶಸ್ಸಿಗೆ ಶುಭ ಹಾರೈಸುತ್ತಿದ್ದಾರೆ.