SK Home Ad
Home ಸುದ್ದಿ ದೇಶ ಜೋಶಿ ವಿರುದ್ಧ ಪ್ರಿಯಾಂಕಾ ಗಾಂಧಿ ಗಂಭೀರ ಆರೋಪ; ಲೋಕಸಭೆಯಲ್ಲಿ ಭಾರೀ ಗದ್ದಲ

ಜೋಶಿ ವಿರುದ್ಧ ಪ್ರಿಯಾಂಕಾ ಗಾಂಧಿ ಗಂಭೀರ ಆರೋಪ; ಲೋಕಸಭೆಯಲ್ಲಿ ಭಾರೀ ಗದ್ದಲ

0
3

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಸಂಬಂಧಿಸಿದ ಕಾನೂನು ತಿದ್ದುಪಡಿ ಕುರಿತು ಲೋಕಸಭೆಯಲ್ಲಿ ಮಂಗಳವಾರ ನಡೆದ ಚರ್ಚೆಯ ವೇಳೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಸದನದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಯಿತು.

ಚರ್ಚೆಯ ವೇಳೆ ಮಾತನಾಡಿದ ಪ್ರಿಯಾಂಕಾ ಗಾಂಧಿ, “ಗರ್ಭಿಣಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳು ಜೈಲಿನಿಂದ ಬಿಡುಗಡೆಯಾದಾಗ ಸಂತಸ ವ್ಯಕ್ತಪಡಿಸಿದವರು ಈಗಿನ ಶಿಕ್ಷಣ ಸಚಿವ ಪ್ರಹ್ಲಾದ ಜೋಶಿ” ಎಂದು ಆರೋಪಿಸಿದರು. ಅವರ ಈ ಹೇಳಿಕೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಬೆಂಬಲ ವ್ಯಕ್ತಪಡಿಸಿದರು.

ಈ ಆರೋಪಕ್ಕೆ ತಕ್ಷಣವೇ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಹಾಗೂ ಕಿರಣ್ ರಿಜಿಜು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪ್ರಿಯಾಂಕಾ ಗಾಂಧಿ ತಮ್ಮ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರ ಒದಗಿಸಬೇಕು ಎಂದು ಇಬ್ಬರೂ ಒತ್ತಾಯಿಸಿದರು.

ಇದೇ ವೇಳೆ ಪ್ರಹ್ಲಾದ ಜೋಶಿ, ಆಧಾರರಹಿತ ಆರೋಪ ಮಾಡಿರುವ ಪ್ರಿಯಾಂಕಾ ಗಾಂಧಿ ಅವರನ್ನು ಲೋಕಸಭೆಯಿಂದ ಅಮಾನತುಗೊಳಿಸಿ, ಕ್ಷಮೆ ಕೇಳುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ಗಾಂಧಿ, “ಅಪರಾಧಿಗಳನ್ನು ಬೆಂಬಲಿಸಿರುವ ಸಚಿವರ ವಿಡಿಯೋ ನನ್ನ ಬಳಿ ಇದೆ. ಅಗತ್ಯವಿದ್ದರೆ ಅದನ್ನು ಮಂಡಿಸುತ್ತೇನೆ” ಎಂದು ಸವಾಲು ಹಾಕಿದರು.

ಪ್ರಿಯಾಂಕಾ ಗಾಂಧಿ ಹಾಗೂ ಸಚಿವರ ನಡುವಿನ ವಾಗ್ವಾದದಿಂದ ಸದನದಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಗಿದ್ದು, ಸಭಾಧ್ಯಕ್ಷರು ಸದಸ್ಯರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.